
ಬೆಂಗಳೂರು: ನಗರದಲ್ಲಿ ಆಟೋ ಪ್ರಯಾಣ ದರ ದುಬಾರಿಗೊಂಡಿದ್ದು, ಪರಿಷ್ಕೃತ ದರ ಶುಕ್ರವಾರದಿಂದ ಜಾರಿಗೆ ಬಂದಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಅವರ ಆದೇಶದಂತೆ ಆಟೋದಲ್ಲಿ ಪ್ರಯಾಣಿಲುವ ಜನರು ಮೊದಲ 2 ಕಿಮೀ (ಕನಿಷ್ಠ ದರ) ಪ್ರಯಾಣಕ್ಕೆ 36 ರೂ.ಪಾವತಿಸಬೇಕಿದೆ.
ಬಸ್, ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳದ ನಂತರ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರು ಮತ್ತು ಸಂಘಟನೆಗಳು ಆಗ್ರಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಕಳೆದ ಜು.14 ರಂದು ಆಟೋ ಪ್ರಯಾಣ ದರ ಹೆಚ್ಚಿಸಿ ಆದೇಶಿಸಿದ್ದರು. ಈ ಆದೇಶವು ಇಂದು ಜಾರಿಗೆ ಬಂದಿದೆ.
ಆದೇಶದ ಪ್ರಕಾರ ಮೊದಲ 2 ಕಿಮೀ ಪ್ರಯಾಣದ ಮೊತ್ತವು 30 ರು.ನಿಂದ 36 ರು.ಗೆ ಹೆಚ್ಚಳವಾಗಿದ್ದು, ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರೂ.ನಿಂದ 18ರೂ.ಗೆ ಹೆಚ್ಚಿಸಲಾಗಿದೆ.
ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರೂ.ನಿಂದ 10 ರೂ.ಗೆ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರೂ.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಇದೀಗ ಈ ಪರಿಷ್ಕೃತ ದರವು ಇಂದಿನಿಂದ ಅನ್ವಯವಾಗಿದ್ದು, ನಗರದಲ್ಲಿ ಆಟೋ ಪ್ರಯಾಣಕ್ಕೆ ಹೆಚ್ಚಳದ ದರ ಪಾವತಿಸಬೇಕಿದೆ. ಅಲ್ಲದೆ, ಈ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿ ಆಟೋಗಳಲ್ಲಿಯೂ ಪ್ರದರ್ಶಿಸಬೇಕು ಹಾಗೂ ಅಕ್ಟೋಬರ್ 10ರೊಳಗೆ (90 ದಿನ) ಮೀಟರ್ ಅನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದ್ದಾರೆ.
ಏತನ್ಮಧ್ಯೆ ಹೆಚ್ಚಿನ ಶುಲ್ಕ ವಿಧಿಸುವ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಆಗಸ್ಟ್ 1 ರಿಂದ ಪರಿಷ್ಕೃತ ಆಟೋ ದರಗಳು ಜಾರಿಗೆ ಬರುತ್ತಿದ್ದು, ಆಟೋ ಚಾಲಕರು ಕಾನೂನನ್ನು ಪಾಲಿಸಬೇಕು ಮತ್ತು ಮೀಟರ್ ಮೂಲಕ ಹೋಗಬೇಕು. ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ಪರಿಷ್ಕೃತ ದರಗಳನ್ನು ಜಾರಿಗೊಳಿಸಬೇಕು ಮತ್ತು ನಿಯಮ ಪಾಲಿಸದ ಆಟೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಗರದಲ್ಲಿ ಮೀಟರ್ ಮೂಲಕ ಹೋಗುವ ಆಟೋಗಳು ಅಪರೂಪವಾಗಿ ಹೋಗಿದೆ. ಕೆಲವೊಮ್ಮೆ ಮೀಟರ್‌ನಿಂದ 20 ರೂ. ಹೆಚ್ಚುವರಿಯಾಗಿ ಪಾವತಿಸುವುದರೂ ನಮಗೆ ಸಮಸ್ಯೆ ಇಲ್ಲ. ಆದರೆ ಆಟೋ ಚಾಲಕರು ಎಷ್ಟು ದುರಾಸೆಯಿಂದ ಕೂಡಿದ್ದಾರೆಂದರೆ ಅವರು ಮೀಟರ್ ದರಕ್ಕಿಂತ ಸುಮಾರು ಮೂರು-ನಾಲ್ಕು ಪಟ್ಟು ಹೆಚ್ಚು ಕೇಳುತ್ತಾರೆ ಎಂದು ವೃದ್ಧ ಮಹಿಳೆ ಬಾನುಮತಿ ಎಂಬುವವರು ಹೇಳಿದ್ದಾರೆ.
ಬಹುತೇಕ ಆಟೋ ಚಾಲಕರಿಗೆ ಕಾನೂನಿನ ಮೇಲೆ ಭಯವಿಲ್ಲ. ಪುಣೆಯಂತಹ ನಗರಗಳಲ್ಲಿ ಪ್ರತೀ ಆಟೋಗಳೂ ಮೀಟರ್'ನ್ನು ಅನುಸರಿಸುತ್ತೇವೆ. ಹೊರಗಿವರೂ ಕೂಡ ಅಲ್ಲಿ ಚೌಕಾಶಿ ಮಾಡದೆ ಆಟೋಗಳಲ್ಲಿ ಪ್ರಯಾಣ ಮಾಡುತ್ತಾರೆ. ಹೆಚ್ಚುವರಿ ಶುಲ್ಕ ವಿಧಿಸುವವರ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ. ಆದರೆ, ಇಲ್ಲಿ ಹಲವಾರೂ ದೂರುಗಳ ಹೊರತಾಗಿಯು ಸಂಚಾರ ಮತ್ತು ಸಾರಿಗೆ ಇಲಾಖೆಯಿಂದ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ, ಆಟೋ ಚಾಲಕರು ತಮ್ಮ ಇಚ್ಚೆಗೆ ತಕ್ಕಂತೆ ಶುಲ್ಕ ವಿಧಿಸುತ್ತಾರೆಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.
ಈ ಬಗ್ಗೆ ಆಟೋ ಯೂನಿಯನ್ ಪ್ರತಿಕ್ರಿಯಿಸಿದ್ದು, ಪರಿಷ್ಕೃತ ದರಗಳಿಂದ ನಾವು ತೃಪ್ತರಾಗಿಲ್ಲ. ಮೂಲ ದರವಾಗಿ ರೂ.40 ಮತ್ತು ನಂತರ ಪ್ರತೀ ಕಿಲೋಮೀಟರ್'ಗೆ 20 ರೂಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಸಂಚಾರ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ, ಮೀಟರ್ ಅನುಸರಿಸದ ಮತ್ತು ಸೇವೆ ನೀಡಲು ನಿರಾಕರಿಸುವ ಆಟೋಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು ಎಂದು ಸಂಚಾರ ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತನಾಡಿ, ದರ ಪರಿಷ್ಕರಣೆ ಅಂತಿಮವಾಗಿದ್ದು, ನಾವು ಕೂಡ ಅಭಿಯಾನಗಳನ್ನು ಪ್ರಾರಂಭಿಸುತ್ತೇವೆಂದು ತಿಳಿಸಿದ್ದಾರೆ.
Advertisement