
ಬೆಂಗಳೂರು: ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದ್ದು, ಈ ನಡುವಲ್ಲೇ ಮೊದಲ ದಿನವೇ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ನಡೆಸುತ್ತಿವೆ.
ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಎನ್‌ಡಿಎ ಮೈತ್ರಿಕೂಟದ ಶಾಸಕರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನದಿಂದ 11 ಜನ ಅಮಾಯಕರ ಸಾವಿಗೆ ಕಾರಣವಾದ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಘಟನೆ ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ನಡೆದು 11 ಜನ ಅಮಾಯಕರು ಪ್ರಾಣಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ, ಸಚಿವರು ಹೊಣೆಹೊರುವುದು ಬಿಟ್ಟು ಅಮಾಯಕ ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಹೊರಿಸಿ, ಅಮಾನತು ಮಾಡಿದ್ದರು. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ, ಯುವಜನತೆ ಸರ್ಕಾರಿ ಉದ್ಯೋಗಕ್ಕಾಗಿ ಹೋರಾಡುತ್ತಿದ್ದಾರೆ. ಇದರ ವಿರುದ್ಧ ಸದನದ ಹೊರಗಡೆ ಹಾಗೂ ಒಳಗಡೆ ನಾವು ಧ್ವನಿ ಎತ್ತುತ್ತೇವೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ನಾಯಕರ ಪೋಟೋ ಶೋಕಿಯಿಂದ ಹನ್ನೊಂದು ಅಮಾಯಕ ಅಭಿಮಾನಿಗಳ ದುರ್ಮರಣವಾಗಿದೆ. ಇದು ಸರ್ಕಾರಿ ಪ್ರಾಯೋಜಿತ ಕೊಲೆ. ಆ ಸಾವಿಗೆ ನಾವು ನ್ಯಾಯವನ್ನು ಒದಗಿಸಲು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತುತ್ತೇವೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು, ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
Advertisement