
ಬೆಂಗಳೂರು: ಪತ್ನಿ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ 30 ವರ್ಷದ ಗೆಳೆಯನೇ ತನ್ನ ಕುಚುಕು ಗೆಳೆಯನನ್ನು ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ವಿಜಯ್ ಕುಮಾರ್ (39) ಮೃತಪಟ್ಟ ದುರ್ದೈವಿ. ಈತನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆತನ ಬಾಲ್ಯ ಸ್ನೇಹಿತ ಧನಂಜಯ ಅಲಿಯಾಸ್ ಜಯ್ ಎಂಬಾತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ, ವಿಜಯ್ ಮತ್ತು ಧನಂಜಯ 30 ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಸುಂಕದಕಟ್ಟೆಯಲ್ಲಿ ನೆಲೆಸುವ ಮೊದಲು ಮಾಗಡಿಯಲ್ಲಿ ಒಟ್ಟಿಗೆ ಬೆಳೆದಿದ್ದರು. ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್‌ನಲ್ಲಿ ತೊಡಗಿಸಿಕೊಂಡಿದ್ದ ವಿಜಯ್ ಸುಮಾರು ಹತ್ತು ವರ್ಷಗಳ ಹಿಂದೆ ಆಶಾ ಅವರನ್ನು ವಿವಾಹವಾಗಿದ್ದರು. ಈ ದಂಪತಿ ಕಾಮಾಕ್ಷಿಪಾಳ್ಯದಲ್ಲಿ ವಾಸಿಸುತ್ತಿದ್ದರು.
ಧನಂಜಯ್ ಸ್ನೇಹಿತನಾದ ಕಾರಣ ಆಗಾಗ್ಗೆ ಅವರ ಮನೆಗೆ ಬಂದು ಹೋಗುವುದು ಮಾಡುತ್ತಿದ್ದ. ಹೀಗೆ ಅವರಿಬ್ಬರು ನಡುವೆ ಪ್ರೇಮಾಂಕುರವಾಗಿದ್ದು, ಅಕ್ರಮ ಸಂಬಂಧವಿರುವುದು ವಿಜಯ್‌ಗೆ ತಿಳಿದುಬಂದಿದೆ. ಇದರಿಂದ ಬೇಸತ್ತ ವಿಜಯ್, ಹೆಂಡತಿಯನ್ನು ಬದಲಾಯಿಸಲು ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗಿಲ್ಲ.
ವಿಜಯ್ ಅವರು ಆಶಾ ಮತ್ತು ಧನಂಜಯ ಒಟ್ಟಿಗೆ ಇರುವ ಫೋಟೋಗಳನ್ನು ನೋಡಿದ್ದಾರೆ. ಇದರಿಂದ ಅವರ ಸಂಬಂಧದ ಬಗ್ಗೆ ಖಚಿತವಾಯಿತು. ನಂತರ ವಿಜಯ್, ಆಶಾಳನ್ನು ಉಳಿಸಿಕೊಳ್ಳಲು ಮಾಗಡಿಯಿಂದ ಸುಂಕದಕಟ್ಟೆಗೆ ಮನೆ ಸ್ಥಳಾಂತರ ಮಾಡಿದ್ದರು ಎನ್ನಲಾಗಿದೆ. ಆದರೆ ಅವರಿಬ್ಬರ ಸಂಬಂಧ ಮುಂದುವರೆದಿದ್ದರಿಂದ ಕಡಬಗೆರೆ ಬಳಿಯ ಮಾಚೋಹಳ್ಳಿಯ ಬಾಡಿಗೆ ಮನೆಗೆ ತೆರಳಿ ಮದುವೆ ಉಳಿಸುವ ಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ದಿನ ವಿಜಯ್ ಸಂಜೆಯವರೆಗೂ ಮನೆಯಲ್ಲೇ ಇದ್ದು ಹೊರಗೆ ಹೋಗಿದ್ದರು. ಬಳಿಕ ಮಾಚೋಹಳ್ಳಿಯ ಡಿಗ್ರೂಪ್ ಲೇಔಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಆಶಾಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಧನಂಜಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Advertisement