
ಬೆಂಗಳೂರು: ತಿಗಳರಪೇಟೆ ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪೊಲೀಸು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಟ್ಟಡ ಮಾಲೀಕರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಈ ಎರಡು ಕಟ್ಟಡಗಳ ಮಾಲೀಕರನ್ನು ಬಂಧನಕ್ಕೊಳಪಡಿಸಲಾಗಿದೆ. ಮಾಲೀಕರು ಯಾವುದೇ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಯಾವುದೇ ಅನುಮತಿಯಿಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದಾರೆಂದು ಹೇಳಿದ್ದಾರೆ.
ಅಗ್ನಿ ದುರಂತ ಘಟನೆ ಬೆನ್ನಲ್ಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸದ ಆರೋಪದ ಮೇರೆಗೆ ಕಟ್ಟಡಗಳ ಮಾಲಿಕರ ವಿರುದ್ದ ಎಫ್ಐಆರ್ ದಾಖಲಾಗಿತ್ತು.
ಕಟ್ಟಡದ ಮಾಲಿಕ ಬಾಲಕೃಷ್ಣಯ್ಯ ಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಮೇಲೆ ಆರೋಪ ಕೇಳಿ ಬಂದಿತ್ತು, ಮೃತನ ಸೋದರ ಗೋಪಾಲ್ ಸಿಂಗ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು.
ಎಫ್ಐಆರ್ ಗೋಪಾಲ್ ಸಿಂಗ್ ಅವರು, ಗಾಣಿಗೇರ್ ಪೇಟೆಯಲ್ಲಿ ಸಂದೀಪ್ ಶೆಟ್ಟಿ ಅವರಿಗೆ ಸೇರಿದ ಕಟ್ಟಡದಲ್ಲಿ ನನ್ನ ಸೋದರ ಮದನ್ ಕುಟುಂಬ ನೆಲೆಸಿದ್ದರು. ಅದೇ ಕಟ್ಟಡದಲ್ಲಿ ಅಂಗಡಿಗೆ ಸೇರಿದ ಸಲಕರಣೆ ಇಡಲು ಗೋದಾಮು ಸಹ ಮಾಡಿಕೊಂಡಿದ್ದರು. ಇನ್ನು ಆ ಕಟ್ಟಡದ ಪಕ್ಕದಲ್ಲಿದ್ದ ಬಾಲಕೃಷ್ಣ ಶೆಟ್ಟಿ ಅವರಿಗೆ ಸೇರಿದ ಕಟ್ಟಡದಲ್ಲಿ ಗಣಪತ್‌ಗೆ ಸೇರಿದ ಗೋದಾಮಿನಲ್ಲಿ ಸುರೇಶ್ ಕೆಲಸ ಮಾಡಿಕೊಂಡಿದ್ದರು. ನನ್ನ ಸೋದರನ ಮನೆಗೆ ಬೆಂಕಿ ಬಿದ್ದಿರುವ ಸಂಗತಿ ನಸುಕಿನ 3.30ರಲ್ಲಿ ಗೊತ್ತಾಯಿತು. ಈ ದುರಂತದಲ್ಲಿ ನನ್ನ ಸೋದರ ಕುಟುಂಬ ಹಾಗೂ ಸುರೇಶ್ ಮೃತಪಟ್ಟಿದ್ದಾರೆ.
ಈ ಘಟನೆಗೆ ಕಟ್ಟಡ ಮಾಲೀಕರಾದ ಬಾಲ ಕೃಷ್ಣಯ್ಯ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ ಹಾಗೂ ಇತರರು ಸಂಬಂಧಪಟ್ಟ ಇಲಾಖೆಯಿಂದ ಸುರಕ್ಷತೆಯ ಬಗ್ಗೆ ಅನುಮತಿ ಪಡೆದುಕೊಳ್ಳದೆ, ನಿಯಮ ಬಾಹಿರವಾಗಿ ಕಟ್ಟಡ ಕಟ್ಟಿದ್ದಾರೆ. ಅಕ್ರಮ ಲಾಭ ಪಡೆಯುವ ದುರುದ್ದೇಶದಿಂದ ಬಾಡಿಗೆದಾರರಿಗೆ ಮನೆ ನೀಡಿದ್ದರು. ಈ ದುರಂತಕ್ಕೆ ಕಾರಣ ಆಗಿರುವ ಬಾಲಕೃಷ್ಣಯ್ಯ, ಸಂದೀಪ್ ಮತ್ತು ಇತರರ ವಿರುದ್ಧ ಕ್ರಮ ಜರುಗಿಸುವಂತೆ ಉಲ್ಲೇಖಿಸಿದ್ದಾರೆ.
Advertisement