
ಬೆಂಗಳೂರು: ನಾಟಕೀಯ ಘಟನೆಯೊಂದರಲ್ಲಿ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ 38 ವರ್ಷದ ಉದ್ಯಮಿಯೊಬ್ಬರು ತನ್ನ ಮನೆಗೆ ನುಗ್ಗಿದ್ದ ದರೋಡೆಕೋರನನ್ನು ಸುಮಾರು 40 ನಿಮಿಷಗಳ ಕಾಲ ಬೇಸ್‌ಬಾಲ್ ಬ್ಯಾಟ್ ಹಿಡಿದು ಹೋರಾಡಿ ಹಿಮ್ಮೆಟ್ಟಿಸಿರುವ ಘಟನೆ ನಡೆದಿದೆ.
ಹೆಚ್ ಎಸ್ ಆರ್ ಲೇಔಟ್ ನ 2ನೇ ಸೆಕ್ಟರ್‌ನ ನಿವಾಸಿ ಟಿ ಅಜಿತ್ ಕುಮಾರ್ ರೆಡ್ಡಿ ಅವರ ನಿವಾಸದಲ್ಲಿ ಬುಧವಾರ ರಾತ್ರಿ 11 ರಿಂದ ಗುರುವಾರ ಬೆಳಗಿನ ಜಾವ 2 ಗಂಟೆಯ ನಡುವೆ ಈ ಘಟನೆ ನಡೆದಿದೆ. ಆರೋಪಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅದೇ ಪ್ರದೇಶದ ನರಸಿಂಹಲು (50) ಎಂದು ಗುರುತಿಸಲಾಗಿದೆ. ಅಪರಾಧ ನಡೆದ ಸ್ಥಳದಲ್ಲಿ ಆಕಸ್ಮಿಕವಾಗಿ ಆತ ಬೀಳಿಸಿದ್ದ ಕಾರಿನ ಕೀ ಯಿಂದ ಪೊಲೀಸರು ಆತನನ್ನು ಪತ್ತೆ ಹೆಚ್ಚಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರೆಡ್ಡಿ, ಮೊದಲ ಮಹಡಿಯ ಕೊಠಡಿಯಲ್ಲಿ ಮಲಗಿದ್ದಾಗ ಚಾಕು ಮತ್ತು ಹಗ್ಗದೊಡನೆ ಬಂದ ಮುಸುಕುದಾರಿಯಿಂದ ಎಚ್ಚರವಾಯಿತು. ಎತ್ತರವಾಗಿದ್ದ ಅಪರಿಚಿತ ಉತ್ತಮ ಮೈಕಟ್ಟು ಹೊಂದಿದ್ದ. ಮುಖಕ್ಕೆ ಮಾಸ್ಕ್ ಹಾಕಿದ್ದ.ನನ್ನ ಬಳಿಗೆ ಜಿಗಿದು ಕಳ್ಳತನಕ್ಕೆ ಸಹಕರಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ತದನಂತರ ಹಗ್ಗದಿಂದ ನನ್ನನ್ನು ಕಟ್ಟಿಹಾಕಲು ಪ್ರಯತ್ನಿಸಿದ ಎಂದು ತಿಳಿಸಿದರು.
ಸ್ಕ್ರೂಡ್ರೈವರ್ ಮತ್ತು ಬೆನ್ನಿಗೆ ಬ್ಯಾಗ್ ವೊಂದನ್ನು ಕಟ್ಟಿಕೊಂಡಿದ್ದ ಆರೋಪಿ ದಾಳಿ ಮಾಡಲು ಶುರು ಮಾಡುತ್ತಿದ್ದಂತೆಯೇ, ಆತನನ್ನು ದೂರ ತಳ್ಳಿ ಮನೆಯ ಮೂಲಕ ಓಡಿದೆ. ಆದರೆ ನನ್ನನ್ನು ಬೆನ್ನಟ್ಟಿ, ಮನೆ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳನ್ನು ಹಾಕಿದ. ಸಿಕ್ಕಿದ ಬೇಸ್ ಬಾಲ್ ಬ್ಯಾಟ್ ನಿಂದ ಹೋರಾಡಿದೆ. ಒಂದು ಹಂತದಲ್ಲಿ ಆತನ ಮಾಸ್ಕ್ ಬಿಚ್ಚುಕೊಂಡಿದ್ದು, ಮುಖವನ್ನು ನೋಡಿದೆ. ಕೋಪಗೊಂಡ ಆತ ನನ್ನ ಮೇಲೆ ಹೊಡೆಯಲು ಮುಂದಾಗುತ್ತಿದ್ದಂತೆಯೇ ಬೇಸ್ ಬಾಲ್ ನಿಂದ ಹೋರಾಡಿ ಪ್ರಾಣ ಉಳಿಸಿಕೊಂಡೆ ಎಂದು ರೆಡ್ಡಿ ತಿಳಿಸಿದರು.
ಸುಮಾರು ಹೊತ್ತು ನಡೆದ ಹೋರಾಟದ ಬಳಿಕ ದರೋಡೆಕೋರ ಕಾಲ್ಕಿತ್ತಿದ್ದಾನೆ. ಈ ವೇಳೆ ಆತ ಕಾರು ಕೀ ವೊಂದನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ತದನಂತರ ಅದನ್ನು ರೆಡ್ಡಿ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಯು ರಾತ್ರಿ 11 ಗಂಟೆ ಸುಮಾರಿಗೆ ಕಾಂಪೌಂಡ್ ಗೋಡೆ ಹಾರಿದ್ದು, ಮನೆಯ ಕಿಟಕಿಯ ಗಾಜನ್ನು ಒಡೆದು ಒಳಗಿನಿಂದ ಹಿಂಬಾಗಿಲನ್ನು ತೆರೆದು ಒಳನುಗ್ಗಲು ಸುಮಾರು 90 ನಿಮಿಷ ತೆಗೆದುಕೊಂಡಿರುವುದು ಸೆರೆಯಾಗಿದೆ.
ಈ ಸಂಬಂಧ BNS 331(6) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪರಾಧಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement