BMTC
ಬಿಎಂಟಿಸಿ ಬಸ್ ಗಳುBMTC

BMTC ಬಸ್​ ಅಪಘಾತಗಳಿಂದ ಒಂದೇ ತಿಂಗಳಲ್ಲಿ ನಾಲ್ವರು ಸಾವು: ಶಬ್ದರಹಿತ e-bus ಗಳು ಕಾರಣವೇ?

ಎಲೆಕ್ಟ್ರಿಕ್ ಬಸ್ ಗಳು ಹಠಾತ್ ವೇಗವರ್ಧನೆ ಮತ್ತು ಕಠಿಣ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಈ ಬಸ್ ಗಳ ಚಾಲಕರನ್ನು ಬಿಎಂಟಿಸಿ ನೇಮಿಸುತ್ತಿಲ್ಲ. ಬದಲಿಗೆ ಒಪ್ಪಂದದ (ಜಿಸಿಸಿ) ಅಡಿಯಲ್ಲಿ ಆ ಬಸ್‌ಗಳನ್ನು ನಿರ್ವಹಿಸುವ ಕಂಪನಿಗಳೇ ನೇಮಕ ಮಾಡುತ್ತಿವೆ.
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಈ ಅಪಘಾತಗಳಿಗೆ ಶಬ್ದರಹಿತ ಎಲೆಕ್ಟ್ರಿಕ್ ಬಸ್ ಗಳೇ ಕಾರಣವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಎಲೆಕ್ಟ್ರಿಕ್ ಬಸ್ ಗಳು ಹಠಾತ್ ವೇಗವರ್ಧನೆ ಮತ್ತು ಕಠಿಣ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಬಸ್ ಗಳ ಚಾಲಕರನ್ನು ಬಿಎಂಟಿಸಿ ನೇಮಿಸುತ್ತಿಲ್ಲ. ಬದಲಿಗೆ ಒಪ್ಪಂದದ (ಜಿಸಿಸಿ) ಅಡಿಯಲ್ಲಿ ಆ ಬಸ್‌ಗಳನ್ನು ನಿರ್ವಹಿಸುವ ಕಂಪನಿಗಳೇ ನೇಮಕ ಮಾಡುತ್ತಿವೆ ಎಂದು ತಿಳಿದುಬಂದಿದೆ.

ಖಾಸಗಿ ಬಸ್‌ಗಳು, ಕ್ಯಾಬ್‌ಗಳು ಮತ್ತು ಆಟೋಗಳನ್ನು ಪ್ರತಿನಿಧಿಸುವ ಕರ್ನಾಟಕ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರು ಮಾತನಾಡಿ, ಬಿಎಂಟಿಸಿಯಿಂದ ನೇರವಾಗಿ ನೇಮಕಗೊಂಡ ಚಾಲಕರು ಕಠಿಣ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಆದರೆ, ಎಲೆಕ್ಟ್ರಿಕ್ ಬಸ್‌ಗಳನ್ನು ಖಾಸಗಿ ಕಂಪನಿಗಳಿಂದ ನೇಮಿಸಲ್ಪಟ್ಟ ಚಾಲಕರು ನಿರ್ವಹಿಸುತ್ತಾರೆ. ಈ ಹಿಂದೆ ಲಘು ಮೋಟಾರು ವಾಹನಗಳನ್ನು ನಿರ್ವಹಿಸುತ್ತಿದ್ದ ಚಾಲಕರಿಗೆ ದೊಡ್ಡ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲಾಗುತ್ತಿದೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಪಘಾತಗಳಿಗೆ ಮತ್ತೊಂದು ಕಾರಣವೆಂದರೆ ಈ ಬಸ್‌ಗಳು ಶಬ್ದರಹಿತವಾಗಿರುವುದು. ಸಾಮಾನ್ಯವಾಗಿ ವಾಹನಗಳನ್ನು ಇತರೆ ವಾಹನ ಬಳಕೆದಾರರು ಹಾಗೂ ಪಾದಚಾರಿಗಳು ಅವುಗಳ ಶಬ್ಧ ಮೂಲಕ ಪತ್ತೆ ಮಾಡುತ್ತಾರೆ. ಆದರೆ, ಎಲೆಕ್ಟ್ರಿಕ್ ಬಸ್ ಗಳು ಶಬ್ಧರಹಿತವಾಗಿರುವುದರಿಂದ ಅಪಘಾತಗಳಿಗೆ ಇದು ಕಾರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಿಕ್ ಬಸ್'ಗಳ ಹಠಾತ್ ಬ್ರೇಕ್ ಮತ್ತು ವೇಗವರ್ಧನೆಯಿಂದ ಬಸ್‌ನೊಳಗಿನ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆಯ ಪ್ರಯಾಣಿಕರು ಸಮತೋಲನ ಕಳೆದುಕೊಳ್ಳುವುದರಿಂದ ಗಾಯಗೊಳ್ಳುವುದು ಮಾತ್ರವಲ್ಲದೆ, ರಸ್ತೆಯಲ್ಲಿರುವ ವಾಹನ ಬಳಕೆದಾರರಿಗೆ ಕೂಡ ಸಮಸ್ಯೆಯಾಗುತ್ತಿದೆ, ಈ ವರ್ಷದ ಆರಂಭದಲ್ಲಿ ಬಿಎಂಟಿಸಿ ಚಾಲಕರಿಗೆ ಕಾರ್ಯಾಗಾರಗಳನ್ನು ನಡೆಲಾಗಿದೆ. ಆದರೆ ಅದು ಹೆಚ್ಚು ಸಹಾಯ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

BMTC
ಎರಡು ಬಿಎಂಟಿಸಿ ಬಸ್​ ಮಧ್ಯೆ ಸಿಲುಕಿ ಆಟೋ ಅಪ್ಪಚ್ಚಿ; ಭೀಕರ ಅಪಘಾತದಲ್ಲಿ ಇಬ್ಬರು ಸಾವು; Video

ಈ ನಡುವೆ ನಾಲ್ಕು ಸಾವುಗಳಲ್ಲಿ ಮೂರು ಸಾವುಗಳು ಬಿಎಂಟಿಸಿ ಚಾಲಕರ ದೋಷಗಳಿಂದ ಸಂಭವಿಸಿಲ್ಲ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಜಿಟಿ ಪ್ರಭಾಕರ್ ರೆಡ್ಡಿ ಅವರು ಹೇಳಿದ್ದಾರೆ.

ಪ್ರತಿ ಬಾರಿ ಅಪಘಾತ ಸಂಭವಿಸಿದಾಗಲೂ, ನಮ್ಮ ಬಸ್‌ಗಳಲ್ಲಿ ಅಳವಡಿಸಲಾದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ನಾವು ವಿಶ್ಲೇಷಿಸುತ್ತೇವೆ. ಚಾಲಕರಿಂದ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆದರೆ ಮೂರು ಪ್ರಕರಣಗಳಲ್ಲಿ ನಮ್ಮ ಚಾಲಕರ ತಪ್ಪಿಲ್ಲ. ಸಾಕಷ್ಟು ಪ್ರಕರಣದಲ್ಲಿ ನಮ್ಮಚಾಲಕರು ತಪ್ಪಿಲ್ಲದಿದ್ದರೂ ಅವರನ್ನು ದೂಷಿಸಲಾಗುತ್ತದೆ. ರಸ್ತೆಯಲ್ಲಿ ಸಾಗುವ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿದರೆ, ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಅಪಘಾತಗಳ ತಡೆಗಟ್ಟಲು 'ರಿಫ್ರೆಶರ್ ತರಬೇತಿ'

ಏತನ್ಮಧ್ಯೆ ಅಪಘಾತಗಳನ್ನು ತಡೆಗಟ್ಟಲು ಮುಂದಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಎಲ್ಲಾ 12,000 ಚಾಲಕರಿಗೆ 'ರಿಫ್ರೆಶರ್ ತರಬೇತಿ'ಯನ್ನು ನಡೆಸಲು ಮುಂದಾಗಿದೆ.

ಎಲ್ಲಾ ಚಾಲಕರು ತರಬೇತಿಯ ನಂತರವೇ ಸೇವೆಗೆ ನಿಯೋಜನೆಗೊಂಡಿದ್ದಾರೆ. ಆದಾಗ್ಯೂ, ಅಪಘಾತಗಳನ್ನು ತಡೆಗಟ್ಟುವುದು, ಸಂಚಾರ ನಿಯಮಗಳನ್ನು ಪಾಲಿಸುವುದು ಮತ್ತು ಒತ್ತಡ ನಿರ್ವಹಣೆ ಎಂಬ ಮೂರು ಅಂಶಗಳ ಮೇಲೆ ಕೇಂದ್ರೀಕರಿಸುವ ರಿಫ್ರೆಶರ್ ತರಬೇತಿಯನ್ನು ನಾವು ಯೋಜಿಸಿದ್ದೇವೆಂದು ರೆಡ್ಡಿಯವರು ಮಾಹಿತಿ ನೀಡಿದ್ದಾರೆ.

"ಅಪಘಾತಗಳನ್ನು ತಪ್ಪಿಸುವುದು ಹೇಗೆ ಎಂಬುದರ ಕುರಿತು ವೀಡಿಯೊಗಳನ್ನು ಪ್ಲೇ ಮಾಡುತ್ತೇವೆ. ವೀಡಿಯೊಗಳನ್ನು ತೋರಿಸುವ ಮೂಲಕ ಚಾಲಕರಿಗೆ ತರಬೇತಿ ನೀಡಿ, ಚೆನ್ನಾಗಿ ಅರ್ಥಮಾಡಿಸಲಾಗುವುದು. BMTC ಬಸ್‌ಗಳ ಡ್ಯಾಶ್ ಕ್ಯಾಮ್‌ಗಳಿಂದ ರೆಕಾರ್ಡ್ ಮಾಡಲಾದ ಸಾಕಷ್ಟು ವೀಡಿಯೊಗಳು ನಮ್ಮಲ್ಲಿವೆ, ಅಲ್ಲಿ ನಮ್ಮ ಚಾಲಕರು ಅಪಘಾತಗಳನ್ನು ತಡೆಗಟ್ಟಿದ್ದಾರೆ. ಏಳು BMTC ವಲಯ ಕಚೇರಿಗಳಲ್ಲಿ 50 ಜನರ ಬ್ಯಾಚ್‌ಗಳಾಗಿ ವಿಂಗಡಿಸುವ ಮೂಲಕ ಎಲ್ಲಾ ಚಾಲಕರಿಗೆ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

ಈ ನಡುವೆ 10 ವರ್ಷದ ಬಾಲಕಿ ಸಾವು ಪ್ರಕರಣ ಸಂಬಂಧ ಮಾತನಾಡಿರುವ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು, ಹಠಾತ್ ಬ್ರೇಕ್ ಹಾಕಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

BMTC
BMTC ಬಸ್ ಹರಿದು 10 ವರ್ಷದ ಬಾಲಕಿ ದುರ್ಮರಣ; Video

ದ್ವಿಚಕ್ರ ವಾಹನ ಮುಂದೆ ನಿಂತಿತ್ತು. ಬಾಲಕಿಯ ತಾಯಿ ಹಠಾತ್ ಬ್ರೇಕ್ ಹಾಕಿದ್ದು, ಇದರಿಂದ ಸಮತೋಲನ ಕಳೆದುಕೊಂಡ ಬಾಲಕಿ ಬಸ್ ಚಕ್ರಗಳ ಕೆಳಗೆ ಬಿದ್ದಿದ್ದಾಳೆ. ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸುವುದು ನಿಯಮ ಉಲ್ಲಂಘನೆಯಾಗಿದ್ದು, ಈ ನಿಯಮ ಉಲ್ಲಂಘಿಸುವವರಿಗೆ 500 ರೂ. ದಂಡ ವಿಧಿಸಬಹುದು ಎಂದು ತಿಳಿಸಿದ್ದಾರೆ.

ಹಾಸನ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಮತ್ತು ಇತರ ಸ್ಥಳಗಳಲ್ಲಿ, ಸಂಚಾರ ಪೊಲೀಸರು ವಾಹನ ಬಳಕೆದಾರರು ಮತ್ತು ಪಾದಚಾರಿಗಳನ್ನು ಬೂತ್‌ಗಳಿಂದ ಗಮನಿಸುವ ಮೂಲಕ ಮತ್ತು ಮೈಕ್ರೊಫೋನ್ ಬಳಸಿ ಪೊಲೀಸ್ ಕಾರನ್ನು ಚಲಿಸುವ ಮೂಲಕ ಸಾರ್ವಜನಿಕ ಘೋಷಣೆಗಳನ್ನು ಮಾಡುತ್ತಾರೆ. ವಾಹನ ಬಳಕೆದಾರರು ಮೊಬೈಲ್ ಬಳಸುವುದು, ರಸ್ತೆಬದಿಯಲ್ಲಿ ಪಾರ್ಕಿಂಗ್ ಮಾಡುವುದು, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ನಿರ್ಲಕ್ಷ್ಯದ ಚಾಲನೆ ಇತ್ಯಾದಿಗಳನ್ನು ನೋಡಿದ ಕೂಡಲೇ ಮೈಕ್ರೊಫೋನ್‌ ಮೂಲಕ ಎಚ್ಚರಿಸುತ್ತಾರೆ. ಈ ಮೂಲಕ ಸಾರ್ವಜನಿಕರಿಗೆ ಸಂಚಾರ ನಿಯಮದ ಶಿಕ್ಷಣ ನೀಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಇದು ಶಬ್ದ ಮಾಲಿನ್ಯ ಮತ್ತು ಸಾರ್ವಜನಿಕ ಕಿರಿಕಿರಿಯನ್ನು ಹೆಚ್ಚಿಸುತ್ತದೆ. ಪ್ರಯಾಣಿಕರು ತಾವು ಬುದ್ಧಿವಂತರು ಎಂದು ಭಾವಿಸಿ, ಪ್ರಕಟಣೆಗಳನ್ನು ನಿರ್ಲಕ್ಷಿಸುತ್ತಾರೆ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣವಾಗುವ ಚಾಲಕರ ವಜಾ: BMTC

  • ಸರಣಿ ಅಪಘಾತ ಘಟನೆಗಳ ಹಿನ್ನೆಲೆಯಲ್ಲಿ ಬಿಎಂಟಿಸಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಅಪಘಾತಗಳ ತಡೆಗಟ್ಟಲು ಕೆಲ ನಿರ್ಧಾರಗಳನ್ನು ಪ್ರಕಟಿಸಿದೆ.

  • ಮಾರಣಾಂತಿಕ ಅಪಘಾತಗಳಲ್ಲಿ ಭಾಗಿಯಾಗಿರುವ ಚಾಲಕರನ್ನು ಕರ್ತವ್ಯದಿಂದ ವಜಾಗೊಳಿಸಲಾಗುತ್ತದೆ/ಅಮಾನತುಗೊಳಿಸಲಾಗುತ್ತದೆ.

  • ಚಾಲಕರು ಕರ್ತವ್ಯದಲ್ಲಿರುವಾಗ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದರೆ, 15 ದಿನಗಳವರೆಗೆ ಅಮಾನತುಗೊಳಿಸಲಾಗುತ್ತದೆ ಮತ್ತು ಇತರ ಡಿಪೋಗಳಿಗೆ ವರ್ಗಾಯಿಸಲಾಗುತ್ತದೆ,

  • ಡಿಪೋಗಳಲ್ಲಿ ಮದ್ಯಪಾನ ಪರೀಕ್ಷೆ ಮತ್ತು ಸಾರಥಿ ಗಸ್ತು ವಾಹನಗಳಿಂದ ಮಾರ್ಗ ಮಧ್ಯದಲ್ಲಿ ತಪಾಸಣೆ ನಡೆಸಲಾಗುತ್ತದೆ.

  • ಬಸ್‌ಗಳನ್ನು ಡಿಪೋಗಳಿಂದ ಹೊರತರುವ ಮೊದಲು ಚಾಲಕರಿಗೆ ಪ್ರತಿದಿನ ಮಾಹಿತಿ ನೀಡಲಾಗುತ್ತದೆ.

  • ವಲಯ ಮಟ್ಟದಲ್ಲಿ ವಾರಕ್ಕೆ ಎರಡು ಬಾರಿ ಚಾಲನಾ ತರಬೇತಿ.

  • ಬಿಎಂಟಿಸಿ ಪ್ರಯಾಣಿಕರು ಮತ್ತು ದ್ವಿಚಕ್ರ ವಾಹನ ಸವಾರರು ಭಾರೀ ವಾಹನಗಳ ನಡುವೆ ಚಲಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ರಸ್ತೆಯ ಎಡಭಾಗದಿಂದ ಬಸ್‌ಗಳನ್ನು ಹಿಂದಿಕ್ಕಬಾರದು ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com