
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಮತ್ತೊಂದು ಜೀವ ಬಲಿ ಪಡೆದುಕೊಂಡಿದೆ. 10 ವರ್ಷದ ಬಾಲಕಿಯ ತಲೆ ಮೇಲೆ ಬಸ್ ಚಕ್ರ ಹರಿದು ಸಾವನ್ನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ಬಳಿ ಗುರುವಾರ ನಡೆದಿದೆ.
ಮೃತ ಬಾಲಕಿಯನ್ನು ತನ್ವಿ (10) ಎಂದು ಗುರುತಿಸಲಾಗಿದೆ. ಮೃತ ಬಾಲಕಿ ಮಿಲೆನಿಯಂ ಸ್ಕೂಲ್‌ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಹರ್ಷಿತಾ ಅವರು ಮಗಳನ್ನು ಸ್ಕೂಲ್‌ಗೆ ಬಿಡಲು ಹೋದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ದ್ವಿಚಕ್ರ ವಾಹನದಲ್ಲಿ ಬಾಲಕಿಯನ್ನು ತಾಯಿ ಕರೆದುಕೊಂಡು ಹೋಗುತ್ತಿದ್ದು, ಯಲಹಂಕದ ಕೋಗಿಲು ಮುಖ್ಯ ರಸ್ತೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ವಾಹನ ಸ್ಕಿಡ್ ಆಗಿದೆ.
ಈ ವೇಳೆ ವಾಹನದಿಂದ ಕೆಳಗೆ ಬಿದ್ದ ಬಾಲಕಿಯ ತಲೆ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದಿದ್ದು, ಬಾಲಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಘಟನೆ ಬೆನ್ನಲ್ಲೇ ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಬಿಎಂಟಿಸಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement