
ಬೆಂಗಳೂರು: ಬೆಂಗಳೂರಿನಲ್ಲಿ BMTCಗೆ ಮತ್ತೊಂದು ಬಲಿಯಾಗಿದ್ದು, ಬಸ್ ಅಡಿ ಸಿಲುಕಿ ಟೆಕ್ಕಿ ಸಾವನ್ನಪ್ಪಿರುವ ಘಟನೆ ಸಂಜಯನಗರ ಮುಖ್ಯ ರಸ್ತೆಯ ವೈಭವ್ ಥಿಯೇಟರ್ ಬಳಿ ಮಂಗಳವಾರ ನಡೆದಿದೆ.
ಸಂಜಯ್ ನಗರದ ಎಇಸಿಎಸ್ ಲೇಔಟ್ ನಿವಾಸಿ ರೋಷನ್ (38) ಮೃತಪಟ್ಟವರು. ಇವರು ಕೊಡಗು ಮೂಲದವರಾಗಿದ್ದು, ನಗರದಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ಮಂಗಳವಾರ ಬೆಳಗ್ಗೆ 10.15ರ ಸುಮಾರಿಗೆ ಮಗು ಮತ್ತು ಪತ್ನಿಗೆ ಉಪಹಾರ ತರಲು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬಲಭಾಗದಿಂದ ಕಾರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಯಾ ತಪ್ಪಿ ಕೆಳಗೆ ಬಿದ್ದಿದ್ದು, ಕೆಳಗೆ ಬಿದ್ದಾತನ ಮೇಲೆ ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರಗಳು ಹರಿದಿದೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ರೋಷನ್ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದರು. ಹೀಗಾಗಿ ತಲೆಗೆ ಯಾವುದೇ ಗಾಯವಾಗಿಲ್ಲ. ಆದರೆ ದೇಹದ ಮೇಲೆ ಬಸ್ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ರೋಷನ್ ಅವರ ಮಾವ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಸ್ ಚಾಲಕ ಕಲ್ಲಪ್ಪ (45) ಅವರನ್ನು ಬಂಧಿಸಿದ್ದು, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement