
ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ,
ಕೊಲೆಯ ನಂತರ ಬಂಧನ ಭೀತಿಯಲ್ಲಿ ರಾತ್ರೋರಾತ್ರಿ ದೇಶ ಬಿಟ್ಟು ಪರಾರಿಯಾಗಿದ್ದ ಜಗದೀಶ್‌ನ ಪತ್ತೆಗೆ ಸಿಐಡಿ ಅಧಿಕಾರಿಗಳು ಇಂಟರ್‌ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದರು.
ದುಬೈ, ಥಾಯ್ಲೆಂಡ್, ಇಂಡೋನೇಷ್ಯಾ, ಶ್ರೀಲಂಕಾ ಸೇರಿದಂತೆ ದೇಶದಿಂದ ದೇಶಕ್ಕೆ ವಾಸ್ತವ್ಯ ಬದಲಿಸುತ್ತಿದ್ದ ಜಗದೀಶ್, ಅಂತಿಮವಾಗಿ ಸೋಮವಾರ ರಾತ್ರಿ ದೆಹಲಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಜುಲೈ 15ರಂದು ರಾತ್ರಿ ಹಲಸೂರಿನ ಮನೆ ಬಳಿಯೇ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಬಿಕ್ಲು ಶಿವ ತಾಯಿ ನೀಡಿದ ದೂರಿನ ಆಧಾರದ ಮೇಲೆ ಭಾರತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿತ್ತು.
ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಲಾಗಿತ್ತು. ಆದರೆ, ಪ್ರಮುಖ ಆರೋಪಿ ಜಗದೀಶ್ ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ. ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ್ ಅವರನ್ನು ಎರಡು ಬಾರಿ ವಿಚಾರಣೆಗೊಳಪಡಿಸಲಾಗಿದೆ.
Advertisement