
ಬೆಂಗಳೂರು: ಪ್ರಸಕ್ತ ಸಾಲಿನ ಮೇ ಅಥವಾ ಜೂನ್ ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರ ಸರ್ಕಾರವು ಬೃಹನ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಪುರಸಭೆ ಚುನಾವಣೆಗಳನ್ನು ನಡೆಸುವ ಘೋಷಣೆಯನ್ನು ಮಾಡಿದ್ದು, ತಿಂಗಳ ಅಂತ್ಯದ ವೇಳೆಗೆ ಇತರ ಹಿಂದುಳಿದ ಕೋಟಾ (ಒಬಿಸಿ) ಕುರಿತು ಸುಪ್ರೀಂ ಕೋರ್ಟ್ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗಳನ್ನು ನಡೆಸುವ ಒತ್ತಡಗಳು ಹೆಚ್ಚಾಗಲಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಶಾಲಾ ಕಾಲೇಜುಗಳ ಪರೀಕ್ಷೆಗಳ ನಂತರ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಸಂಪುಟದ ಹಿರಿಯ ಸಚಿವ ಮತ್ತು ಶಾಸಕ ಆರ್. ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ಸರ್ಕಾರವು ಗ್ರೇಟರ್ ಬೆಂಗಳೂರು ಯೋಜನೆ ಕುರಿತು ಸಿದ್ಧತೆಗಳ ನಡೆಸುತ್ತಿದ್ದು, ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ನಂತರ ಬಿಬಿಎಂಪಿಗೆ ಚುನಾವಣೆಗಳನ್ನು ಕೂಡ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಯಲಿದ್ದು, ಅದರ ಅಂತ್ಯದ ವೇಳೆಗೆ ಮಸೂದೆ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಹಣಕಾಸು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿಗೆ ಹತ್ತಿರವಿರುವ ಮೂಲವೊಂದು ಮಾಹಿತಿ ನೀಡಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲೇಬೇಕಿದ್ದು, ಸರ್ಕಾರವು ಮತ್ತಷ್ಟು ವಿಳಂಬ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಬೇಕಿದೆ. ಆದರೆ, ಶಾಲಾ-ಕಾಲೇಜು ವಿದ್ಯಾರ್ಧಿಗಳ ಪರೀಕ್ಷೆಗಳು ಕೂಡ ಇದೇ ಬರುವುದರಿಂದ ಸಮಸ್ಯೆಯಾಗಲಿದೆ. ಹೀಗಾಗಿ ಮೇ ಅಥವಾ ಜೂನ್ ತಿಂಗಳನಲ್ಲಿ ಚುನಾವಣೆ ನಡೆಯಬಹುದು. ಈ ಬಗ್ಗೆ ಸರ್ಕಾರ ನ್ಯಾಯಾಲಯವನ್ನು ಸಂಪರ್ಕಿಸಲಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಗಳನ್ನು ನಡೆಸುವ ಅಧಿಸೂಚನೆಯನ್ನು ಏಪ್ರಿಲ್ ಅಂತ್ಯದಲ್ಲಿ ಪ್ರಕಟಿಸಲಾಗುವುದು. ಈ ದಿನಾಂಕದಿಂದ 45 ದಿನಗಳ ಒಳಗೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Advertisement