
ಬೆಂಗಳೂರು: ಪತ್ನಿಯ ಕತ್ತು ಹಿಸುಕಿ ಹತ್ಯೆಗೈದ ಪತಿಯೊಬ್ಬ, ತಾನೇ ಸೂಲಿಬೆಲೆ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮುಂದ ಶರಣಾಗಿದ್ದಾನೆ.
ರಬಿಯಾ (32) ಮೃತ ಮಹಿಳೆ. ನಿಜಾಮುದ್ದೀನ್ (35) ಬಂಧಿತ ಆರೋಪಿ. ದಂಪತಿಗಳು ತಮ್ಮ ಮಕ್ಕಳೊಂದಿಗೆ ಈ ಹಿಂದೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ವಾಸಿಸುತ್ತಿದ್ದರು. ವೃತ್ತಿಯಲ್ಲಿ ಸರಕು ವಾಹನ ಚಾಲಕನಾಗಿರುವ ನಿಜಾಮುದ್ದೀನ್, ಪತ್ನಿಯ ಅಕ್ರಮ ಸಂಬಂಧಗಳ ಬಗ್ಗೆ ತಿಳಿದ ನಂತರ, ಹೊಸಕೋಟೆಗೆ ಸ್ಥಳಾಂತರಗೊಂಡು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ರಬಿಯಾ ವಿಜಯಪುರಕ್ಕೆ ಮರಳಲು ನಿಜಾಮುದ್ದೀನ್ ಜೊತೆ ಪದೇ ಪದೇ ಜಗಳವಾಡುತ್ತಿದ್ದು, ಇದಕ್ಕೆ ನಿಜಾಮುದ್ದೀನ್ ನಿರಾಕರಿಸಿದ್ದ. ಈ ನಡುವೆ ಪತಿ ಮನೆಯಲ್ಲಿ ಇಲ್ಲದ ವೇಳೆ ಪರಪುರುಷರೊಂದಿಗೆ ರಬಿಯಾ ಕಾಲ ಕಳೆಯುತ್ತಿದ್ದು, ಇದನ್ನು ತಿಳಿದು, ಆಕೆಯನ್ನು ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.
ರಬಿಯಾ ಮೂವರು ಮಕ್ಕಳ ತಾಯಿಯಾಗಿದ್ದು, ಮಕ್ಕಳೆಲ್ಲರು ಮನೆಯಲ್ಲಿಯೇ ಇದ್ದ ಕಾರಣ , ಊಟದ ನಂತರ ವಾಕಿಂಗ್ ಗೆಂದು ಮನೆಯ ಸಮೀಪದ ಕೆರೆ ಬಳಿಗೆ ಕರೆದುಕೊಂಡು ಹೋಗಿದ್ದಾನೆ.
ಆ ವೇಳೆ ಪತ್ನಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಆಕೆಯ ಕತ್ತು ಹಿಸುಕಿ ಹತ್ಯೆ ಗೈದಿದ್ದಾನೆ. ಬಳಿಕ ತಾನೇ ಠಾಣೆಗೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಇದೀಗ ಮಹಿಳೆಯ ಶವವನ್ನು ಪತ್ತೆ ಮಾಡಿರುವ ಪೊಲೀಸರು, ಹೊಸಕೋಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.
Advertisement