ಬೆಂಗಳೂರಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ಶೀಘ್ರಗತಿಯಲ್ಲಿ BBMP ಚುನಾವಣೆ ನಡೆಸಿ: ಸರ್ಕಾರಕ್ಕೆ BJP ಆಗ್ರಹ

ಬಿಬಿಎಂಪಿಗೆ ಚುನಾವಣೆ ನಡೆಸುವ ಮನಸ್ಸಿಲ್ಲದ ಸರ್ಕಾರ ‘ಗ್ರೇಟರ್‌ ಬೆಂಗಳೂರು ರಚಿಸುತ್ತೇವೆ. ಇನ್ನಷ್ಟು ಪ್ರದೇಶಗಳನ್ನು ಬೆಂಗಳೂರಿಗೆ ಸೇರಿಸುತ್ತೇವೆ’ ಎಂದು ಹೇಳುತ್ತಿದೆ. ಇರುವ ನಗರವನ್ನೇ ಸುಧಾರಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಹೊಸ ಪ್ರದೇಶಗಳ ಅಭಿವೃದ್ಧಿ ಹೇಗೆ ಸಾಧ್ಯ?
ಬಿಜೆಪಿ ಪ್ರತಿಭಟನೆ
ಬಿಜೆಪಿ ಪ್ರತಿಭಟನೆ
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಶೀಘ್ರಗತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಬಿಬಿಎಂಪಿಗೆ ಚುನಾವಣೆ ನಡೆಸುವ ಮನಸ್ಸಿಲ್ಲದ ಸರ್ಕಾರ ‘ಗ್ರೇಟರ್‌ ಬೆಂಗಳೂರು ರಚಿಸುತ್ತೇವೆ. ಇನ್ನಷ್ಟು ಪ್ರದೇಶಗಳನ್ನು ಬೆಂಗಳೂರಿಗೆ ಸೇರಿಸುತ್ತೇವೆ’ ಎಂದು ಹೇಳುತ್ತಿದೆ. ಇರುವ ನಗರವನ್ನೇ ಸುಧಾರಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಹೊಸ ಪ್ರದೇಶಗಳ ಅಭಿವೃದ್ಧಿ ಹೇಗೆ ಸಾಧ್ಯ? ಬೆಂಗಳೂರನ್ನು ಒಡೆದರೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಿದಂತಾಗುತ್ತದೆ. ಕೆಂಪೇಗೌಡರನ್ನು ನಂಬುವ ಜನರ ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿದರು.

ಈಗ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಿದರೆ ಸಾಕು. ರಸ್ತೆ ಮೇಲ್ಭಾಗದಲ್ಲೇ ಸುರಂಗ ನಿರ್ಮಾಣವಾಗುತ್ತಿರುವಾಗ 150 ಅಡಿ ಕೆಳಗೆ ಸುರಂಗ ಕೊರೆಯಲು ಹೊರಟಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗಳಿಂದ ಜನರು ರೊಚ್ಚಿಗೆದ್ದಿದ್ದಾರೆ. ಬೆಂಗಳೂರು ಇಂದು ಸರಿ ಹೋಗಲಿದೆ ಎಂದು ಜನರು ಕಾಯುತ್ತಿದ್ದಾರೆ. ಬೆಂಗಳೂರಿಗೆ ಬೆಂಗಳೂರಿನವರೇ ಆದ ಸಚಿವರಿಲ್ಲ. ಬೇರೆ ಜಿಲ್ಲೆಯ ಸಚಿವರಿಗೆ ನಗರದ ಬಗ್ಗೆ ಆಸಕ್ತಿ ಇಲ್ಲ. ಸರ್ಕಾರದಿಂದಾಗಿ ಬೆಂಗಳೂರು ಅನಾಥವಾಗಿದೆ. ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ.

ಈ ಸಂಬಂಧ ನ್ಯಾಯಾಲಯದಲ್ಲಿ ವಾದ ಮಾಡಲು 15 ತಜ್ಞರ ತಂಡವನ್ನು ರಚಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿ ಸೊನ್ನೆಯಾಗಿದೆ. ರಸ್ತೆ ಗುಂಡಿಗಳ ಆಕಾರ ಸೊನ್ನೆಯಾಗಿರುವಂತೆಯೇ ಅಭಿವೃದ್ಧಿಯೂ ಸೊನ್ನೆಯೇ ಆಗಿದೆ. ರಸ್ತೆ ಗುಂಡಿಗಳಿಂದ ಬಿದ್ದು ಗಾಯಕ್ಕೊಳಗಾಗಿ ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಎಲ್ಲಾ ಕಡೆ ಕಸದ ರಾಶಿ ಕಂಡುಬರುತ್ತಿದೆ.

ಬಿಜೆಪಿ ಪ್ರತಿಭಟನೆ
ನಡೆಯದ ಬಿಬಿಎಂಪಿ ಚುನಾವಣೆ: ಹಳ್ಳ ಹಿಡಿದ ಕಾನೂನು ನಿಯಮ!

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿಮಾಲಯದ ಶಿಖರದಂತೆ ನಗರದ ಅಭಿವೃದ್ಧಿಯನ್ನು ಬ್ರ್ಯಾಂಡ್‌ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅವರೇ ಬೆಂಗಳೂರನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಲು ಸಭೆ ನಡೆಸಲಾಗಿದೆ ಎಂದು ತಿಳಿಸಿದರು,

ಬೆಂಗಳೂರು ಡಾನ್, ಮಾಫಿಯಾಗಳ ಕೈಗೆ ಸಿಲುಕಿದೆ. ಮೈಸೂರು ಗಲಭೆ, ಬೆಂಗಳೂರಿನ ಬಾಂಬ್ ಬ್ಲಾಸ್ಟ್, ಅತ್ಯಾಚಾರ ಮೊದಲಾದ ಅಪರಾಧಿ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಜನರೇ ಸ್ವತಃ ಆತ್ಮರಕ್ಷಣೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಕಾಂಗ್ರೆಸ್ ನಾಯಕರು ಇನ್ನೂ ಗ್ಯಾರಂಟಿಗಳ ಗುಂಗಿನಲ್ಲೇ ಇದ್ದಾರೆ. ಕೊಲೆ, ಸುಲಿಗೆ ನಿರಂತರವಾಗಿದ್ದು, ಈ ಸರ್ಕಾರ ತೊಲಗಿದರೆ ಸಾಕು ಎಂದು ಜನರು ಹೇಳುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ಜವಾಬ್ದಾರಿ ವಹಿಸಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿ, ನಗರವನ್ನು ದೇವರಿಗೆ ಅರ್ಪಣೆ ಮಾಡಿದ್ದಾರೆ. ರಾಜಧಾನಿಯನ್ನು ದೇವರೇ ಕಾಪಾಡಬೇಕಿದೆ. ಬೆಂಗಳೂರಿನ ಉಸ್ತುವಾರಿಯನ್ನು ಯಾರಾದರೂ ವಹಿಸಿಕೊಳ್ಳಲಿ. ಆದರೆ ಬೆಂಗಳೂರನ್ನು ಉದ್ಧಾರ ಮಾಡುವವರು, ನಗರದ ಬಗ್ಗೆ ಜ್ಞಾನ ಇರುವವರು ಸಚಿವರಾಗಲಿ ಟಾಂಗ್ ನೀಡಿದರು.

ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಮುಂದಿನ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ ಪ್ರಾರಂಭವಾಗಲಿದೆ. ಈ ವೇಳೆ ಬೆಂಗಳೂರು ಅಭಿವೃದ್ಧಿ ಸೇರಿದಂತೆ ಕೆಲವು ವಿಷಯಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com