
ಬೆಂಗಳೂರು: ಚಿಕ್ಕಪ್ಪನಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ್ದರಿಂದ ಮನನೊಂದ 24 ವರ್ಷದ ಮಹಿಳೆಯೊಬ್ಬರು ಹೋಟೆಲ್ ಕೊಠಡಿಯೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ವೈಟ್‌ಫೀಲ್ಡ್‌ನ ಇಪಿಐಪಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಧಾ ಹೋಮ್‌ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 45 ವರ್ಷದ ಆರೋಪಿಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ಕಾಳೇನ ಅಗ್ರಹಾರದ ಎಂಎಲ್ಎ ಲೇಔಟ್ ನಿವಾಸಿಯಾಗಿದ್ದು, ಸಾಫ್ಟ್‌ವೇರ್ ವೃತ್ತಿಪರರಾಗಿದ್ದರು. ಆರೋಪಿಯನ್ನು ಆರ್ ಪ್ರವೀಣ್ ಸಿಂಗ್ ಎಂದು ಗುರುತಿಸಲಾಗಿದ್ದು, ಕೆಆರ್ ಪುರಂನ ಎಸ್‌ವಿಎಸ್ ಪ್ಯಾರಡೈಸ್ ಅಪಾರ್ಟ್‌ಮೆಂಟ್ ನಿವಾಸಿ.
ಸಂತ್ರಸ್ತೆಯ ತಾಯಿ ಪ್ರವೀಣ್ ಮತ್ತು ಆತನ ಪತ್ನಿ ಸಂಧ್ಯಾ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ಕುಟುಂಬವು ರಾಜಸ್ಥಾನ ಮೂಲದವರಾಗಿದ್ದು, ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.
'ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹೋಟೆಲ್ ಕೊಠಡಿಯೊಳಗೆ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಕೊಂಡು ಬಂದ ಸಂತ್ರಸ್ತೆ, ಪ್ರವೀಣ್ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಕೃತ್ಯದಿಂದ ಬೆಚ್ಚಿಬಿದ್ದ ಆತ ಬೆಂಕಿ ನಂದಿಸಲು ಯತ್ನಿಸಿದ್ದು, ಬಲಗೈಗೆ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 10 ಗಂಟೆ ಸುಮಾರಿಗೆ ಆಕೆ ಕೊನೆಯುಸಿರೆಳೆದಿದ್ದಾಳೆ. ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಿಯ ಪತ್ನಿಯ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ' ಎಂದು ಅಧಿಕಾರಿಯೊಬ್ಬರು ಹೇಳಿದರು.
ಕೆಲಸಕ್ಕೆ ಹೋಗಲು ಅನುಕೂಲವಾಗಿದೆ ಎಂದು ಕಳೆದ ಆರು ವರ್ಷಗಳಿಂದ ಸಂತ್ರಸ್ತೆಯು ಆರೋಪಿಯ ಮನೆಯಲ್ಲಿ ತಂಗಿದ್ದರು. ಈ ವೇಳೆ, ಪ್ರವೀಣ್ ಆಕೆ ಸ್ನಾನ ಮಾಡುವಾಗ ಮತ್ತು ಬಟ್ಟೆ ಬದಲಿಸುವಾಗ ಆಕೆಯ ಪೋಟೊಗಳು ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಆರೋಪಿ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋದಾಗಲೂ ಆತ ಇದನ್ನೇ ಮಾಡಿದ್ದಾನೆ.
ಫೋಟೊಗಳು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಆರೋಪಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಸಹಕರಿಸದಿದ್ದರೆ ಅವುಗಳನ್ನು ಆಕೆಯ ಪೋಷಕರೊಂದಿಗೆ ಹಂಚಿಕೊಳ್ಳುವುದಾಗಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಈ ಕಿರುಕುಳದ ಬಗ್ಗೆ ತನ್ನ ಸ್ನೇಹಿತೆ ಬಳಿ ಬಹಿರಂಗಪಡಿಸಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆದರೆ, ಸ್ನೇಹಿತೆ ಆಕೆಯ ಮೇಲೆ ವಿಶ್ವಾಸ ಮೂಡಿಸಿ, ಈ ವಿಚಾರವನ್ನು ಪೋಷಕರಿಗೆ ತಿಳಿಸುವಂತೆ ಹೇಳಿದ್ದರು.
ಘಟನೆ ನಂತರ ಪ್ರವೀಣ್ ತನಗೇನೂ ತಿಳಿದಿಲ್ಲದವನಂತೆ ವರ್ತಿಸಿದ್ದಾನೆ. ಸೋಮವಾರ ಬೆಳಗ್ಗೆ ಸಂತ್ರಸ್ತೆಯ ಸ್ನೇಹಿತೆ ಆಕೆಯ ತಾಯಿಗೆ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ ನಂತರವೇ ನಿಖರ ಕಾರಣ ಬೆಳಕಿಗೆ ಬಂದಿದೆ. ಆರೋಪಿ ಮತ್ತು ಆತನ ಪತ್ನಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Advertisement