
ಮಂಗಳೂರು: ಪತ್ನಿಯನ್ನು ಗುಂಡಿಕ್ಕಿ ಕೊಂದು ನಂತರ ರಬ್ಬರ್ ಸಂಸ್ಕರಣೆಗೆ ಬಳಸುವ ಆ್ಯಸಿಡ್ ಸೇವಿಸಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ.
54 ವರ್ಷದ ರಾಮಚಂದ್ರಗೌಡ ಕಳೆದ ರಾತ್ರಿ ತನ್ನ ಪತ್ನಿ ವಿನೋದಾ ಕುಮಾರಿಗೆ ಗುಂಡಿಕ್ಕಿ ಕೊಂದಿದ್ದಾನೆ. ನಂತರ ರಬ್ಬರ್ ಆ್ಯಸಿಡ್ ಸೇವಿಸಿ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಮಗ ಪ್ರಶಾಂತ್ ನೀಡಿದ ದೂರಿನ ಪ್ರಕಾರ, ಆತನ ತಂದೆ ಮದ್ಯವ್ಯಸನಿಯಾಗಿದ್ದು, ತನ್ನ ಅಜ್ಜ-ಅಜ್ಜಿ ಮತ್ತು ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ.
ಜನವರಿ 17 ರಂದು, ರಾಮಚಂದ್ರ ಎಂದಿನಂತೆ ಕುಡಿದ ಅಮಲಿನಲ್ಲಿದ್ದನು ಮತ್ತು ರಾತ್ರಿ 11.30 ರ ಸುಮಾರಿಗೆ, ನಿರ್ಮಾಣ ಹಂತದ ಮನೆಯಲ್ಲಿ ಅಡುಗೆ ಕೋಣೆಯೊಳಗೆ ಇದ್ದ ತನ್ನ ಪತ್ನಿ ವಿನೋದಾಳೊಂದಿಗೆ ಜಗಳವಾಡಿದನು.
ಅವರ ಜಗಳವನ್ನು ತಡೆಯಲು ಪ್ರಶಾಂತ್ ಪ್ರಯತ್ನಿಸಿದಾಗ, ಆರೋಪಿ ಬಂದೂಕನ್ನು ತೆಗೆದುಕೊಂಡು ತನ್ನ ಮಗನ ಮೇಲೆ ಗುರಿಯಿಟ್ಟನು. ಆದರೆ ವಿನೋದಳ ಇದ್ದಕ್ಕಿದ್ದಂತೆ ಪ್ರಶಾಂತಳನ್ನು ರಕ್ಷಿಸಲು ಪ್ರಯತ್ನಿಸಿದಾಗ ಆಕೆಯ ಎದೆಗೆ ಗುಂಡು ತಗುಲಿತು. ಆಕೆ ಸ್ಥಳದಲ್ಲೇ ಸಾವನ್ನಪ್ಪಿದಳು ಮತ್ತು ಪತ್ನಿ ಸತ್ತಿರುವುದನ್ನು ನೋಡಿ ನೊಂದುಕೊಂಡ ರಾಮಚಂದ್ರ ರಬ್ಬರ್ ತೋಟದಲ್ಲಿ ಬಳಸಲಾಗುವ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡನು.
ಇತ್ತೀಚೆಗೆ ಕುಟುಂಬದಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದ ಕಾರಣ ಸ್ಥಳೀಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅವರ ಬಂದೂಕನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ವಿನೋದಾ ಪೊಲೀಸರನ್ನು ವಿನಂತಿಸಿ ಮೂರು ದಿನಗಳ ಹಿಂದೆಯಷ್ಟೇ ಬಂದೂಕನ್ನು ಮನೆಗೆ ತಂದಿದ್ದರು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement