
ಬೆಂಗಳೂರು: ನನ್ನ ನಟನೆಯ ವೃತ್ತಿ ಆರಂಭವಾಗಿದ್ದೇ ಎಪಿಎಸ್ (ಆಚಾರ್ಯ ಪಾಠ ಶಾಲಾ) ನಿಂದ ಎಂದು ಹೇಳಿರುವ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು, ಕನ್ನಡದಲ್ಲಿ ಮಾತನಾಡಿ ತಮ್ಮ ಶಾಲಾ ದಿನಗಳನ್ನು ಸ್ಮರಿಸಿದ್ದಾರೆ.
ಬಸವನಗುಡಿಯ ಆಚಾರ್ಯ ಪಾಠಶಾಲಾ ಶಾಲೆಯ (ಎಪಿಎಸ್) 90ನೇ ವಾರ್ಷಿಕೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಬ್ಯಾಂಕಾಕ್‌ನಿಂದ ವಿಡಿಯೋ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಎಪಿಎಸ್ ಸ್ಕೂಲ್-ಕಾಲೇಜಿನಲ್ಲಿ ಓದಿದಕ್ಕೆ ನನಗೆ ಈಗಲೂ ತುಂಬಾ ಹೆಮ್ಮೆ ಇದೆ. ಮೊದಲು ನಾನು ಗವಿಪುರದಲ್ಲಿರುವ ಗಂಗಧಾರೇಶ್ವರ ದೇವಾಲಯದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ. ನಾನು ಕ್ಲಾಸ್ಗೆ ಫಸ್ಟ್, ಬೆಸ್ಟ್ ಸ್ಟುಡೆಂಟ್, ಕ್ಲಾಸ್ಗೆ ನಾನೇ ಮಾನಿಟರ್ ಆಗಿದ್ದೆ. ಮಿಡಲ್ ಸ್ಕೂಲ್ನಲ್ಲಿ ಶೇ.98 ಸ್ಕೋರ್ ಮಾಡಿದ್ದೆ.
ಸ್ಕೂಲ್ನಲ್ಲಿ ತುಂಬಾ ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡಿದ್ದಕ್ಕೆ ನಮ್ಮ ಅಣ್ಣ, ನನ್ನನ್ನು ಇಂಗ್ಲಿಷ್ ಮೀಡಿಯಂಗೆ ಎಪಿಎಸ್ ಹೈಸ್ಕೂಲ್‌ಗೆ ಸೇರಿಸಿಬಿಟ್ಟ. ಇದರಿಂದ ನಾನು ಫಂಕ್ ಆಗಿಬಿಟ್ಟೆ. ಮೊದಲ ಬೆಂಚ್ನಲ್ಲಿದ್ದ ಸ್ಟುಡೆಂಟ್ ಕೊನೆ ಬೆಂಚ್ಗೆ ಬಂದು ಬಿಟ್ಟೆ. ಇದರಿಂದ ಡಿಪ್ರೆಶನ್ಗೆ ಹೋದೆ. ಆದರೆ, ಎಪಿಎಸ್ ಸ್ಕೂಲ್-ಕಾಲೇಜಿನಲ್ಲಿ ಶಿಕ್ಷಕರು ನನ್ನ ಮೇಲೆ ಸಾಕಷ್ಟು ಅಭಿಮಾನ ತೋರಿಸಿದರು. ಕರುಣೆ ತೋರಿಸಿ, ಪ್ರೇಮದಿಂದ ಪಾಠ ಹೇಳಿದರು. ಇದರಿಂದ ನಾನು 8, 9ನೇ ತರಗತಿಯನ್ನು ಪಾಸ್ ಮಾಡಿದೆ. ಆದರೆ, 10ನೇ ತರಗತಿಯಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದರಿಂದ ಓದುವುದರಲ್ಲಿ ಬಹಳ ವೀಕ್ ಆಗಿದ್ದೆ. ಇದರಿಂದ ಈ ವಿಷಯಗಳಲ್ಲಿ ಫೇಲ್ ಆಗಿದ್ದೆ. ಆವಾಗ ನಮ್ಮ ಕೆಮಿಸ್ಟ್ರೀ ಟೀಚರ್, ಮನಗೆ ಬಂದು 6 ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಉಚಿತವಾಗಿ, ಸ್ಪೆಷಲ್ ಇಂಟ್ರೆಸ್ಟ್ ತೆಗೆದುಕೊಂಡು ಕ್ಲಾಸ್ ಮಾಡುತ್ತಿದ್ದರು. ಹೀಗಾಗಿ 10ನೇ ಕ್ಲಾಸ್ ಪಾಸ್ ಮಾಡಿದೆ. ಇದಾದ ಮೇಲೆ ಅಲ್ಲೇ ಎಪಿಎಸ್ ಕಾಲೇಜಿಗೆ ಸೇರಿದೆ. ಆದರೆ ಆ ಮೇಲೆ ಕೆಲ ಕಾರಣಗಳಿಂದ ಕಾಲೇಜು ಕಂಟಿನ್ಯೂ ಮಾಡಲಾಗಲಿಲ್ಲ ಎಂದು ಸ್ಮರಿಸಿದರು.
ಎಪಿಎಸ್ ಹೈಸ್ಕೂಲ್ನಲ್ಲಿ ಓದುವಾಗ ಪ್ರತಿ ವರ್ಷದಂತೆ ಇಂಟರ್ ಹೈಸ್ಕೂಲ್ ಡ್ರಾಮಾಗಳು ನಡೆದವು. ಇದರಲ್ಲಿ 10, 15 ಶಾಲೆಗಳು ಭಾಗಿಯಾಗಿದ್ದವು. ನಾನು ಶಾಲೆಗೆ ಲೇಟ್ ಆಗಿ ಬಂದಾಗ ಟೀಚರ್ ಬಳಿ, ಯಾವುದಾದರೂ ಸಿನಿಮಾ ನೋಡಿದ್ದು, ನಾಟಕ ನೋಡಿದ್ದನ್ನ ಆ್ಯಕ್ಟ್ ಮಾಡಿ, ಕಥೆ ಹೇಳುತ್ತಿದ್ದರಿಂದ ಎಲ್ಲರಿಗೂ ತುಂಬಾ ಇಷ್ಟ ಆಗಿದ್ದೆ. ಇದು ಶಿಕ್ಷಕರಿಗೂ ಗೊತ್ತಾಗಿತ್ತು. ಹೀಗಾಗಿ ಇಂಟರ್ ಹೈಸ್ಕೂಲ್ ಡ್ರಾಮಾ ಕಾರ್ಯಕ್ರಮದಲ್ಲಿ ನೀನು ಡ್ರಾಮಾ ಮಾಡಬೇಕು ಎಂದು ಹೇಳಿದ್ದರು.
ಆದಿಶಂಕರ ಮತ್ತು ಚಾಂಡಾಲ ಭೇಟಿಯ ನಾಟಕವದು. ಈ ದೃಶ್ಯದಲ್ಲಿ ನಾನು ಚಾಂಡಾಲನ ಪಾತ್ರ ನಿರ್ವಹಿಸಿದ್ದೆ. ನೋಡಲು ಚಾಂಡಾಲನಂತೆ ಕಾಣುತ್ತಿದ್ದುದರಿಂದ ನನ್ನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದ್ದರು ಎನ್ನಿಸುತ್ತದೆ. ಈ ನಾಟಕಕ್ಕಾಗಿ ನಮ್ಮ ತಂಡಕ್ಕೆ ಪ್ರಶಸ್ತಿ ಸಿಕ್ಕಿತು. ನನಗೆ ಅತ್ಯುತ್ತಮ ನಟ ಎಂಬ ದೊಡ್ಡ ಕಪ್ ಕೊಟ್ಟರು. ಆಗಿನಿಂದಲೇ ನನ್ನನ್ನು ನಟ ಎಂದು ಅಂಗೀಕಾರ ಮಾಡಿ, ನಟನೆಯನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳುವಂತೆ ಮಾಡಿದ್ದು ಎಪಿಎಸ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ.
ಆ ಹೈಸ್ಕೂಲ್, ಕಲ್ಲಿನ ಕಟ್ಟಡ, ಎದುರಿರುವ ಮೈದಾನ, ಅಲ್ಲಿ ಆಡಿದ ಆಟಗಳನ್ನು ಮರೆಯಲು ಸಾಧ್ಯವಿಲ್ಲ. ಹೈಸ್ಕೂಲ್‌ಗೆ ಹೋಗುವಾಗ ನಮ್ಮ ಮನೆ ಹನುಮಂತನಗರದಲ್ಲಿತ್ತು. ಅಲ್ಲಿಂದ ನಡೆದು ಹೈಸ್ಕೂಲ್ ಹೋಗುವ ರಸ್ತೆ ಯಾವಾಗಲು ಮನಸ್ಸಿನಲ್ಲಿ ಹಚ್ಚಹಸಿರಾಗಿರುತ್ತದೆ. ಮುಂದಿನ ಬಾರಿ ಬಂದಾಗ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಎಪಿಎಸ್ ಹೈಸ್ಕೂಲ್ ಸಿಬ್ಬಂದಿಗೆ ತಿಳಿಸಿದ್ದಾರೆ. ಇದೇ ವೇಳೆ ಎಪಿಎಸ್ ಹೈಸ್ಕೂಲ್- ಕಾಲೇಜಿನ ಹಳೆಯ ವಿದ್ಯಾರ್ಥಿಗಳ ದಿನಾಚರಣೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
Advertisement