
ಬೆಂಗಳೂರು: ಜೆಪಿ ನಗರದ ಸಿಂಧೂರ ಕಲ್ಯಾಣ ಮಂಟಪದ ಸುತ್ತಲೂ ಕೈಗೊಂಡಿರುವ ರಾಜಕಾಲುವೆ ಕಾಮಗಾರಿಯನ್ನು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಅವರು ಸೋಮವಾರ ಸೂಚನೆ ನೀಡಿದರು.
ಬಿಬಿಎಂಪಿ ದಕ್ಷಿಣ ವಲಯದ ವಿವಿಧ ಸ್ಥಳಗಳ ಪರಿಶೀಲನೆಯ ಸಂದರ್ಭದಲ್ಲಿ, ಸಿಂಧೂರ ಕಲ್ಯಾಣ ಮಂಟಪದಿಂದ ಕೆ-210ಕ್ಕೆ ಸಂಪರ್ಕ ಕಲ್ಪಿಸಲು 1.3 ಕಿ.ಮೀ ಉದ್ದದ ಮಳೆ ನೀರು ಹರಿಯುವ ರಾಜಕಾಲುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಪ್ರವಾಹ ಆಗುವುದನ್ನು ತಪ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ನಿರ್ಮಾಣ ಸ್ಥಳಗಳ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ನಿರ್ಮಾಣ ವಲಯದ ಉದ್ದಕ್ಕೂ ಪಾದಚಾರಿ ಮಾರ್ಗಗಳ ಸರಿಯಾದ ನಿರ್ವಹಣೆ ಮಾಡಬೇಕು. ಹೊರ ವರ್ತುಲ ರಸ್ತೆಯ ಚರಂಡಿಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಬೇಕು. ಚರಂಡಿಗಳಿಂದ ತೆಗೆದ ಹೂಳನ್ನು ಸ್ಥಳದಲ್ಲಿಯೇ ಬಿಡದೆ ಕೂಡಲೇ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಜಯನಗರದ 3ನೇ ಬ್ಲಾಕ್‌ನಲ್ಲಿ 5 ಟನ್ ಸಾಮರ್ಥ್ಯದ ಘನತ್ಯಾಜ್ಯ ಜೈವಿಕ ಅನಿಲ ಘಟಕವಿದೆ. ಇಂತಹ ಘಟಕಗಳನ್ನು ನಗರದ ಇತರೆ ಭಾಗಗಳಲ್ಲಿ ಸ್ಥಾಪಿಸಬೇಕು. ಕೆ.ಆರ್. ಮಾರುಕಟ್ಟೆಯಲ್ಲಿ ಸ್ಥಾಪಿಸಿದರೆ, ತ್ಯಾಜ್ಯ ನಿರ್ವಹಣಾ ಸಮಸ್ಯೆ ಬಗೆಹರಿಸಬಹುದು ಎಂದು ತಿಳಿಸಿದರು.
ಬಳಿಕ ಅತ್ತಿಗುಪ್ಪೆ ವಾರ್ಡ್‌ನಲ್ಲಿರುವ ಘನತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ರಸ್ತೆಬದಿಗಳು ಮತ್ತು ಖಾಲಿ ಜಾಗಗಳು ಕಸದ ಸುರಿಯುವ ತಾಣಗಳಾಗಿ ಬದಲಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕಾಗಿ ಮಾರ್ಷಲ್ ಗಳು ಹಾಗೂ ಮೇಲ್ವಿಚಾರಕರ ನೇಮಿಸುವಂತೆಯೂ ಸೂಚನೆ ನೀಡಿದರು.
Advertisement