
ಬೆಂಗಳೂರು: ಕೆ ಆರ್ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರಿಣಾಮಕಾರಿ ಕ್ರಮಗಳ ಕೈಗೊಳ್ಳುತ್ತಿದ್ದು, ಇದರಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದೆ.
ನಿನ್ನೆಯಷ್ಟೇ ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಕೆ.ಆರ್.ಮಾರುಕಟ್ಟೆಯಲ್ಲಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸದಾ ಸ್ವಚ್ಛತೆ ಕಾಪಾಡಬೇಕಿದೆ. ಆದರೆ, ವ್ಯಾಪಾರಸ್ಥರು ಸರಿಯಾಗಿ ಸ್ವಚ್ಛತೆ ಕಾಪಾಡಿಕೊಳ್ಳದೆ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದರಿಂದ ಸಮಸ್ಯೆ ಆಗುತ್ತಿದೆ. ಆದ್ದರಿಂದ ತ್ಯಾಜ್ಯ ಬಿಸಾಡುವಂತಹ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸುಮಾರು 70 ಟನ್ ತ್ಯಾಜ್ಯ ಉತ್ಪತ್ತಿಯಾಗಲಿದ್ದು, ಅದನ್ನು ಮೂರು ಪಾಳಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ ಬಳಿಕ ನಿರಂತರವಾಗಿ ಮೇಲ್ವಿಚಾರಣೆ ಮಾಡಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಮಾರ್ಕಿಂಗ್ ಮಾಡಿ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮಾರ್ಕಿಂಗ್ ಸ್ಥಳ ಬಿಟ್ಟು ಬೇರೆಡೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಮಾರುಕಟ್ಟೆ ಹೊರ ಭಾಗದಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುವುದನ್ನು ನಿಯಂತ್ರಿಸುವಂತೆ ಹಾಗೂ ಅಗತ್ಯವಿದ್ದರೆ ಹೆಚ್ಚಿನ ಮಾರ್ಷಲ್‌ಗಳನ್ನು ನಿಯೋಜಿಸುವಂತೆಯೂ ಆಯುಕ್ತರು ಸೂಚನೆ ನೀಡಿದರು. ಅಗತ್ಯವಿದ್ದರೆ ಹೆಚ್ಚಿನ ಮಾರ್ಷಲ್‌ಗಳನ್ನು ನಿಯೋಜಿಸುವಂತೆಯೂ ಆಯುಕ್ತರು ಸೂಚನೆ ನೀಡಿದರು.
ಮಾರುಕಟ್ಟೆಯಲ್ಲಿ ಹೆಚ್ಚು ಅಶುಚಿತ್ವ ಇರುವ ಸ್ಥಳಗಳಲ್ಲಿ ಪ್ರೆಶರ್ ವಾಷರ್ ಬಳಸಿ ಸ್ವಚ್ಛತೆ ಮಾಡಬೇಕು. ಅದಕ್ಕಾಗಿ ಈಗಾಗಲೇ 5 ಹೆಚ್.ಪಿ. ಸಾಮರ್ಥ್ಯದ ಪ್ರೆಶರ್ ವಾಷರ್ ಖರೀದಿಸಿದ್ದು, ಅದರ ಮೂಲಕ ಪ್ರತಿನಿತ್ಯ ಸ್ವಚ್ಚತೆ ಇಲ್ಲದ ಕಡೆ ಸ್ವಚ್ಛಗೊಳಿಸಬೇಕೆಂದು ಸೂಚಿಸಿದರು.
ಮಾರುಕಟ್ಟೆಯ ನೆಲ ಮಹಡಿ ಹಾಗೂ ಇತರೆ ಜಾಗಗಳಲ್ಲಿ ಹೊಸದಾಗಿ ಪಾರ್ಕಿಂಗ್ ಟೆಂಡರ್ ಕರೆದು, ಒಳಗೆ ಹಾಗೂ ಹೊರಗೆ ಹೋಗುವ ಮಾರ್ಗಗಳನ್ನು ಸರಿಯಾಗಿ ನಿಗದಿಡಿಸಿಕೊಳ್ಳಬೇಕು. ಈ ಸಂಬಂಧ ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಪಾರ್ಕಿಂಗ್ ದರ ನಿಗದಿಪಡಿಸಲು ಸೂಚಿಸಿದರು.
Advertisement