ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ, ರೋಗಿಗಳ ಸ್ಥಳಾಂತರ
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದಂತಾಗಿದೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಸ್ಪತ್ರೆಯ ಬರ್ನ್ಸ್ ಬ್ಲಾಕ್ (MBCC) ನಲ್ಲಿರುವ ಸೆಮಿನಾರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಬೆಂಕಿ ಸಂಭವಿಸಿದೆ ಎನ್ನಲಾಗುತ್ತಿದೆ.
ಅಗ್ನಿ ಅವಘಡದಲ್ಲಿ ರಿಜಿಸ್ಟರ್ ಬುಕ್, ಬೆಡ್ ಸುಟ್ಟು ಹೋಗಿದ್ದು, ಫ್ರಿಡ್ಜ್‌ಗೆ ಬೆಂಕಿ ತಗುಲಿ ಸುಟ್ಟ ಗಾಯಗಳ ವಿಭಾಗದ ಗ್ರೌಂಡ್ ಫ್ಲೋರ್ ಪೂರ್ತಿ ಬೆಂಕಿ ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ.
ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ತಕ್ಷಣ ಬೆಂಕಿಯನ್ನು ನಂದಿಸಿದರು. ಈ ವಾರ್ಡ್‌ನಲ್ಲಿ ಒಟ್ಟು 26 ರೋಗಿಗಳಿದ್ದರು. ಅದರಲ್ಲಿ 14 ಪುರುಷರು, 5 ಮಹಿಳೆಯರು ಮತ್ತು 7 ಮಕ್ಕಳು ಇದ್ದು, ಐಸಿಯುನಲ್ಲಿ 5 ರೋಗಿಗಳನ್ನು ದಾಖಲಿಸಲಾಗಿತ್ತು.
ಭಾರಿ ಹೊಗೆಯ ಕಾರಣದಿಂದ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ, ಎಲ್ಲಾ ಬರ್ನ್ಸ್ ರೋಗಿಗಳನ್ನು (26 ರೋಗಿಗಳು) ವಿಕ್ಟೋರಿಯಾ ಆಸ್ಪತ್ರೆಯ ಎಚ್ ಬ್ಲಾಕ್ಗೆ ಸ್ಥಳಾಂತರಿಸಲಾಗಿದೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಇನ್ನು ಘಟನೆ ವೇಳೆ ವೈದ್ಯೆ ದಿವ್ಯಾ ನೇತೃತ್ವದ ತಂಡ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ 3:30ರ ಸುಮಾರಿಗೆ ಡಾ. ದಿವ್ಯಾ ಮೊದಲ ಮಹಡಿಗೆ ಹೋಗಿದ್ದು, ಈ ವೇಳೆ ಸೆಮಿನರ್ ರೂಂನಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಅಲರ್ಟ್ ಆದ ದಿವ್ಯಾ ಅವರು, ಸಿಬ್ಬಂದಿಗಳಿಗೆ ಕೋಡ್ ರೆಡ್ ಅಲರ್ಟ್ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ, ಸೂಪರಿಂಟೆಂಡೆಂಟ್‌ಗಳಿಗೆ ಮಾಹಿತಿ ನೀಡಿದ್ದಾರೆ.
ಬೆಂಕಿ ನಂದಿಸೋ ಪ್ರಯತ್ನದ ಜೊತೆಗೆ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿರುವ ದಿವ್ಯಾ ಅವರು, ಬಳಿಕ ಅಗ್ನಿ ಶಾಮಕ ಸಿಬ್ಬಂದಿಗೆ ಹಾಗೂ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ