
ಬೆಂಗಳೂರು: ನಗರದ ಮಧ್ಯ ಮತ್ತು ಪಶ್ಚಿಮ ವಿಭಾಗಗಳಲ್ಲಿನ ಪಬ್‌ಗಳು ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರತಿದಿನ ಸಿಸಿಟಿವಿ ದೃಶ್ಯಾವಳಿಗಳ ಸಲ್ಲಿಸುವಂತೆ ಪಬ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಸಿಸಿಬಿ ಸೂಚನೆ ನೀಡಿದೆ.
25 ಕ್ಕೂ ಹೆಚ್ಚು ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ನಿಯಮಗಳು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಕೇವಲ ಒಂದ ಬಾರಿಯಲ್ಲ, ಹಲವಾರು ಬಾರಿ ದಾಳಿ ಮಾಡಿ ಎಚ್ಚರಿಕೆ ಕೊಟ್ಟರೂ ಏನು ಪ್ರಯೋಜನವಾಗದ ಹಿನ್ನೆಲೆ ನಿಯಮಗಳ ಉಲ್ಲಂಘನೆಗೆ ಸಿಸಿಬಿ ಹೊಸ ರೂಲ್ಸ್ ಮಾಡಿದೆ.
ಇದರಂತೆ ಪ್ರತಿದಿನದ ಸಿಸಿಟಿವಿ ವಿಡಿಯೋ ತುಣುಕನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕೆಂದು ಸೂಚನೆ ನೀಡಿದೆ.
ಪೆನ್‌ಡ್ರೈವ್ ಅಥವಾ ಸಿಡಿಗೆ ಹಾಕಿ ವಿಡಿಯೋ ನೀಡಬೇಕು. ಸಿಸಿಟಿವಿ ವೀಕ್ಷಣೆ ವೇಳೆ ತಪ್ಪು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.
ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಎಲ್ಲಾ ಮಾಲೀಕರನ್ನು ಸಭೆಗೆ ಕರೆಯಲಾಗಿದ್ದು, ಅಬಕಾರಿ ಕಾನೂನುಗಳು, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ನಿಯಮಗಳು ಮತ್ತು ಉದ್ಯೋಗಿಗಳ ಡ್ರೆಸ್ ಕೋಡ್‌ಗಳು ಸೇರಿದಂತೆ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಾಳಿಗಳ ಸಮಯದಲ್ಲಿ, ಅನೇಕ ಸಂಸ್ಥೆಗಳು ಅನುಮತಿಸಲಾದ ಸಮಯಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿರುವುದು, ಅಪ್ರಾಪ್ತ ವಯಸ್ಕ ಗ್ರಾಹಕರಿಗೆ ಮದ್ಯ ಪೂರೈಸುತ್ತಿರುವುದು ಮತ್ತು ಮಹಿಳಾ ಉದ್ಯೋಗಿಗಳಿಗೆ ಸಂಬಂಧಿಸಿದ ನಿಯಮದಲ್ಲಿ ಉಲ್ಲಂಘನೆಗಳು ಕಂಡುಬಂದಿದೆ.
ಹೀಗಾಗಿ ಹೊಸ ನಿಯಮ ಜಾರಿ ಮಾಡಿ, ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಮಾಲೀಕರಿಗೆ ನಿರ್ದೇಶಿಸಲಾಗಿದೆ. ದೈನಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಯಾ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಪರಿಶೀಲನೆಗಾಗಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement