
ಬೆಂಗಳೂರು: ಪಬ್ ಎದುರು ಯುವತಿಯ ವಿಚಾರಕ್ಕೆ ಎರಡು ಗುಂಪುಗಳ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಜೂನ್ 7ರಂದು ಮಧ್ಯರಾತ್ರಿ 1ರ ಸುಮಾರಿಗೆ ಕೋರಮಂಗಲದ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಬ್ ಹೊರಗೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು.
ಒಂದು ಗುಂಪಿನ ಸದಸ್ಯರು, ಯುವತಿಯನ್ನು ಮಾತನಾಡಿಸಲು ಯತ್ನಿಸಿದ್ದರು. ಆಕೆಯ ಸ್ನೇಹಿತರು ಎದುರಾಳಿ ಗುಂಪಿನೊಂದಿಗೆ ವಾಗ್ವಾದ ನಡೆಸಿದ್ದರು. ಈ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆ, ಕಲ್ಲು ತೂರಾಟ ನಡೆದಿತ್ತು.
ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ದೃಶ್ಯಾವಳಿ ಆಧರಿಸಿ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಮೂವರಲ್ಲಿ ಇಬ್ಬರು ಕೇರಳದವರಾಗಿದ್ದು, ಓರ್ವ ಚಿಕ್ಕಮಗಳೂರು ಮೂಲದವನು ಎಂದು ತಿಳಿದುಬಂದಿದೆ. ಇನ್ನು ಹಲ್ಲೆಗೊಳಗಾಗಿದ್ದ ಮೂವರು ಕೂಡ ಕೇರಳದವರೇ ಆಗಿದ್ದು, ಒಂದೇ ಫ್ಲಾಟ್ ನಲ್ಲಿ ಒಟ್ಟಿಗೆ ವಾಸವಿದ್ದಾರೆನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ (ಆಗ್ನೇಯ) ಸಾರಾ ಫಾತಿಮಾ ಅವರು ಹೇಳಿದ್ದಾರೆ.
Advertisement