News Headlines 11-07-25 | ನಾಯಕತ್ವ ಬದಲಾವಣೆ ವಿಚಾರ ನಾನೇನು ಮಾತಾಡಲ್ಲ: DCM; ಗಾಳಿ ಆಂಜನೇಯ ದೇಗುಲ ಮುಜರಾಯಿ ಇಲಾಖೆ ಸುಪರ್ದಿಗೆ; ನಟಿ ಶ್ರುತಿಗೆ ಚೂರಿ ಇರಿತ; ಸಂಜು ಬಸ್ಯ ಪತ್ನಿಗೆ ಅಶ್ಲೀಲ ಸಂದೇಶ!

News Headlines 11-07-25 | ನಾಯಕತ್ವ ಬದಲಾವಣೆ ವಿಚಾರ ನಾನೇನು ಮಾತಾಡಲ್ಲ: DCM; ಗಾಳಿ ಆಂಜನೇಯ ದೇಗುಲ ಮುಜರಾಯಿ ಇಲಾಖೆ ಸುಪರ್ದಿಗೆ; ನಟಿ ಶ್ರುತಿಗೆ ಚೂರಿ ಇರಿತ; ಸಂಜು ಬಸ್ಯ ಪತ್ನಿಗೆ ಅಶ್ಲೀಲ ಸಂದೇಶ!

1. 5 ವರ್ಷ ನಾನೇ ಸಿಎಂ: Siddaramaiah

ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಿಗಮ-ಮಂಡಳಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಜೊತೆಯಲ್ಲಿ ನಾನು ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಮಾತುಕತೆ ನಡೆಸಿದ್ದೇವೆ. ಆದರೆ ನೇಮಕ ಪ್ರಕ್ರಿಯೆ ಪೂರ್ಣವಾಗಿಲ್ಲ. ಜುಲೈ 16ರಂದು ಸುರ್ಜೆವಾಲಾ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತಾರೆ. ಅಂದು ನಾವು ಎಲ್ಲಾ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕವನ್ನು ಅಂತಿಮಗೊಳಿಸುತ್ತೇವೆ ಎಂದರು. ಇನ್ನು ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಪಕ್ಷದೊಳಗೆ ಅಂತಹ ಒಪ್ಪಂದವಾಗಲೀ, ಚರ್ಚೆಗಳಾಗಲೀ ನಡೆಯುತ್ತಿಲ್ಲ. ಐದೂ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಈ ಬಗ್ಗೆ ಈಗಾಗಲೇ ನಮ್ಮ ಹೈಕಮಾಂಡ್, ರಣದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರೂ ಸ್ಪಷ್ಟನೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

2. ಆ ವಿಚಾರ ನಾನೇನು ಮಾತಾಡುವುದಿಲ್ಲ: DK Shivakumar

ದೆಹಲಿ ಪ್ರವಾಸದಿಂದ ವಾಪಸ್ಸಾದ ಡಿಸಿಎಂ ಡಿಕೆ ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ನೀರಾವರಿ ಯೋಜನೆಗಳ ವಿಚಾರವಾಗಿ ದೆಹಲಿ ಪ್ರವಾಸ ಬಹುತೇಕ ಫಲಪ್ರದವಾಗಿದೆ ಎಂದರು. ಇನ್ನು ಐದು ವರ್ಷ ನಾನೇ ಸಿಎಂ ಆಗಿ ಇರುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷದ ರಾಜ್ಯಾಧ್ಯಕ್ಷ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ಸಿಎಂ ಬದಲಾವಣೆ ವಿಚಾರವಾಗಿ ನಿಮ್ಮ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾನು ಮತ್ತೆ ಆ ವಿಚಾರ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

3. Sandalwood ನಟಿ ಶ್ರುತಿಗೆ ಚೂರಿ ಇರಿತ; ಪತಿ ಬಂಧನ

ಬೆಂಗಳೂರಿನಲ್ಲಿ ಕಿರುತೆರೆ ನಟಿ ಹಾಗೂ ನಿರೂಪಕಿಗೆ ಆಕೆಯ ಗಂಡನೇ ಚಾಕುವಿನಿಂದ ಇರಿದಿದ್ದಾನೆ. ಕನ್ನಡದಲ್ಲಿ ಅಮೃತಧಾರೆ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿರುವ ಮಂಜುಳಾ ಅಲಿಯಾಸ್‌ ಶ್ರುತಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿ ಬಳಿಕ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಜುಲೈ 4ರಂದೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಸ್ತುತ ಹನುಮಂತ ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿ ಅಮರೇಶ್‌ನನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಸಂಜು ಬಸಯ್ಯ ಪತ್ನಿ ಪಲ್ಲವಿಗೆ ಯುವಕನೋರ್ವ ಅಶ್ಲೀಲ ಸಂದೇಶ ರವಾನಿಸಿದ್ದಾನೆ. ಈ ಸಂಬಂಧ ಸಂಜು ಬಸಯ್ಯ ದೂರು ನೀಡಿದ್ದು ಪೊಲೀಸರು ವಿಜಯನಗರದಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸಂಜು ಬಸಯ್ಯ ವಿದ್ಯಾರ್ಥಿಗೆ ಬೈದು ಬುದ್ಧಿ ಹೇಳಿದ್ದು ಆತನ ಭವಿಷ್ಯ ಹಾಳಾಗಬಾರದು ಎಂದು ಕೇಸ್ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.

4. ವಿದ್ಯಾರ್ಥಿಗಳಿಗೆ ಸಾರಿಗೆ ಭಾಗ್ಯ

ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG ಯಿಂದ PUC ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಬಸ್ ಪ್ರಯಾಣ ಘೋಷಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಶಾಲಾ ಮಕ್ಕಳಿಗೆ ಫ್ರೀ ಬಸ್ ಪಾಸಿಗೆ ಡಿಕೆ ಶಿವಕುಮಾರ್ ಸಲಹೆ ನೀಡಿದ್ದಾರೆ ಅಷ್ಟೇ. ಇದು ಕೇವಲ ಸಲಹೆ. ಇದಕ್ಕೆ ಸಂಪುಟದಲ್ಲಿ ಒಪ್ಪಿಗೆ ಬೇಕು. ಕೆಪಿಎಸ್ ಶಾಲೆಯ ಗಂಡುಮಕ್ಕಳಿಗೆ ಉಚಿತ ಬಸ್ ಪಾಸ್ ಇಲ್ಲ. ಶಾಲೆಯಲ್ಲಿ ಓದುವ ಹೆಣ್ಣು ಮಕ್ಕಳಿಗೆ ಈಗಾಗಲೇ ಫ್ರೀ ಇದೆ. ಈ ಯೋಜನೆಗೆ 10 ಕೋಟಿ ರೂಪಾಯಿ ಹೆಚ್ಚು ಖರ್ಚಾಗುತ್ತದೆ ಎಂದರು.

5. ಗಾಳಿ ಆಂಜನೇಯ ದೇಗುಲ ಮುಜರಾಯಿ ಇಲಾಖೆ ಸುಪರ್ದಿಗೆ

ಬೆಂಗಳೂರಿನ ಪ್ರತಿಷ್ಠಿತ ಗಾಳಿ ಆಂಜನೇಯ ದೇಗುಲವನ್ನು ಮುಜುರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಂಡ ನಂತರ ದೇವಸ್ಥಾನದ ಆಡಳಿತ ಮಂಡಳಿ ಸಿಡಿದೆದ್ದಿದೆ. ಈ ಬೆನ್ನಲ್ಲೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿ, ಇದು ತಾತ್ಕಾಲಿಕ, 5 ವರ್ಷದ ನಂತರ ದೇಗುಲವನ್ನು ಟ್ರಸ್ಟ್‌ಗೆ ವಾಪಸ್ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಹಣ ದುರುಪಯೋಗ ಆಗಿದೆ. ಹೀಗಾಗಿ ಈ ಕ್ರಮಕೈಗೊಂಡಿದ್ದೇವೆ. ಯಾವುದೇ ದೇವಸ್ಥಾನದಲ್ಲಿ ಹಣಕಾಸಿನ ದುರುಪಯೋಗ ಆದರೆ ಅದನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಸುಮಾರು 10 ದೇವಾಲಯಗಳನ್ನು ವಶಕ್ಕೆ ಪಡೆದುಕೊಂಡಿತ್ತು ಎಂದು ಹೇಳಿದರು. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com