
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು Digital arrest ಹಗರಣ ಬೆಳಕಿಗೆ ಬಂದಿದ್ದು, ನಕಲಿ ಪೊಲೀಸರು ಇಬ್ಬರು ಮಹಿಳೆಯರ ವಿಚಾರಣೆ ನೆಪದಲ್ಲಿ ವಿವಸ್ತ್ರಗೊಳಿಸಿ ನಿಲ್ಲಿಸಿದ್ದ ಘಟನೆ ವರದಿಯಾಗಿದೆ.
ಹೌದು.. ಬೆಂಗಳೂರಿನ ಇಬ್ಬರು ಮಹಿಳೆಯರನ್ನು ನಕಲಿ ಪೊಲೀಸರು 'ಡಿಜಿಟಲ್ ಅರೆಸ್ಟ್' ಮಾಡಿ ಆನ್ಲೈನ್ ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಅವರನ್ನು ನಗ್ನವಾಗಿ ನಿಲ್ಲಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಅದೇ ವಿಡಿಯೋ ತೋರಿಸಿ ಬೆದರಿಸಿ 50 ಸಾವಿರಕ್ಕೂ ಅಧಿಕ ಹಣ ಕಸಿದುಕೊಂಡಿದ್ದಾರೆ.
ಈ ಕುರಿತು ಈಸ್ಟ್ ಸಿಇಎನ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಏನಿದು ಪ್ರಕರಣ?
ಥೈಲ್ಯಾಂಡ್‌ನಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿರುವ ಮಹಿಳೆ ತನ್ನ ಸ್ನೇಹಿತೆಯನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಇಬ್ಬರೂ ಈ ಡಿಜಿಟಲ್ ಅರೆಸ್ಟ್ ವಂಚನೆಯ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಜುಲೈ 17 ರಂದು ಬೆಳಗ್ಗೆ ರಿಚಾಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ತನ್ನ ಸ್ನೇಹಿತೆಗೆ ವಂಚಕರಿಂದ ಕರೆ ಬಂದಿದ್ದು, ಅವರು ತಾನು "ಜೆಟ್ ಏರ್‌ವೇಸ್ ಹಗರಣ"ದಲ್ಲಿ ಭಾಗಿಯಾಗಿದ್ದೇನೆ ಎಂದು ಆರೋಪಿಸಿದ್ದಾರೆ. ವಂಚಕರು ಆಕೆಯನ್ನು "ಹಣ ವರ್ಗಾವಣೆ, ಕಳ್ಳಸಾಗಣೆ ಮತ್ತು ಕೊಲೆಯಲ್ಲಿಯೂ" ಭಾಗಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರೊಂದಿಗೆ ನೀವು ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿದ್ದಾನೆ. ನೀವು ಮಾನವ ಕಳ್ಳಸಾಗಣೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿಯೂ ಆರೋಪಿಸಿ ಹೆದರಿಸಿದ್ದಾನೆ.
ಇದರಿಂದ ಆಘಾತಕ್ಕೊಳಗಾದ ರಿಚಾ, ತಾನು ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಪ್ರಕರಣಕ್ಕೂ ತನಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಕರೆ ಮಾಡಿದ ವ್ಯಕ್ತಿ ತಾನು ಬಳಸುತ್ತಿದ್ದ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಂಡು ಆಕೆಯನ್ನು ಬಂಧಿಸುವುದಾಗಿ ಹೆದರಿಸಿದ್ದಾನೆ.
ಅಲ್ಲದೆ ನಕಲಿ ಬಂಧನ ವಾರಂಟ್ ಮತ್ತು ಕೇಂದ್ರ ತನಿಖಾ ದಳದ ಗುರುತಿನ ಚೀಟಿ ಸೇರಿ ಅಧಿಕೃತವಾಗಿ ಕಾಣುವ ದಾಖಲೆಗಳನ್ನು ತೋರಿಸಿದ್ದರಿಂದ, ಭಯಭೀತರಾದ ಮಹಿಳೆಯರು, ಪೊಲೀಸ್ ಠಾಣೆಯಿಂದ ಕರೆ ಬಂದಿದೆ ಎಂದು ನಂಬಿದ, ರಿಚಾ ತನ್ನ ಬ್ಯಾಂಕ್ ಖಾತೆಯಿಂದ 58,447 ರೂ.ಗಳನ್ನು ವಂಚಕರಿಗೆ ವರ್ಗಾಯಿಸಿದ್ದಾರೆ.
ಆನ್‌ಲೈನ್ ವೈದ್ಯಕೀಯ ಪರೀಕ್ಷೆ
ಹಣವನ್ನು ಪಡೆದ ನಂತರ, ವಂಚಕರು ಸಂತ್ರಸ್ತರಿಗೆ ಕ್ಲಿಯರೆನ್ಸ್ ಪಡೆಯಬೇಕು ಎಂದು ಹೇಳಿದರು. ಇದಕ್ಕಾಗಿ ಅವರು ಆನ್‌ಲೈನ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಮಹಿಳೆಯರನ್ನು ವಿವಸ್ತ್ರವಾಗುವಂತೆ ಸೂಚನೆ ನೀಡಿದ್ದು, ಅದರಂತೆ ಇಬ್ಬರೂ ಮಹಿಳೆಯರು ಕ್ಯಾಮೆರಾ ಮುಂದೆ ವಿವಸ್ತ್ರರಾಗಿದ್ದಾರೆ.
ಸ್ನೇಹಿತರಿಗೆ ಮಾಹಿತಿ
ಬಾಲ್ಯದ ಸ್ನೇಹಿತರಾದ ಈ ಮಹಿಳೆಯರು, ಸೈಬರ್ ಅಪರಾಧಿಗಳಿಂದ ಸುಮಾರು 9 ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಲ್ಪಟ್ಟಿದ್ದು, ನಂತರ ಮತ್ತೊಬ್ಬ ಸ್ನೇಹಿತನನ್ನು ಸಂಪರ್ಕಿಸಿದಾಗ ತಾವು ಆನ್‌ಲೈನ್ ವಂಚನೆ ಮತ್ತು ಸುಲಿಗೆಗೆ ಬಲಿಯಾಗಿದ್ದೇವೆ ಎಂದು ಅರಿತುಕೊಂಡಿದ್ದಾರೆ. ತೀವ್ರ ಒತ್ತಡ ಮತ್ತು ಕಿರುಕುಳ ಅನುಭವಿಸಿದ ನಂತರ, ರಿಚಾ ಸಹಾಯಕ್ಕಾಗಿ ಸ್ನೇಹಿತೆಯನ್ನು ಸಂಪರ್ಕಿಸಲು ನಿರ್ಧರಿಸಿದಳು. ರಾತ್ರಿ 8 ಗಂಟೆ ಸುಮಾರಿಗೆ ಸ್ನೇಹಿತರಿಗೆ ವಾಟ್ಸಾಪ್ ಕರೆ ಮಾಡಿದ್ದಾರೆ. ಕೂಡಲೇ ಆ ಸ್ನೇಹಿತೆ ಎಲ್ಲಾ ಕರೆಗಳ ಸಂಪರ್ಕ ಕಡಿತಗೊಳಿಸುವಂತೆ ಮತ್ತು ಇನ್ನು ಮುಂದೆ ಹಣವನ್ನು ವರ್ಗಾಯಿಸದಂತೆ ಸಲಹೆ ನೀಡಿದ್ದಾರೆ.
ಕರೆ ಸಂಪರ್ಕ ಕಡಿತಗೊಂಡ ನಂತರ, ವಂಚಕರು ಮತ್ತೆ ಮಹಿಳೆಯರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಮತ್ತು ಅವರ ನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಲ್ಲದೇ, ಅವುಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿದರು. ವಂಚಕರ ಈ ಕಿರುಕುಳದಿಂದಾಗಿ ಇಬ್ಬರೂ ಮಹಿಳೆಯರು ಸುಮಾರು ಒಂಬತ್ತು ಗಂಟೆಗಳ ಕಾಲ ತೀವ್ರ ಭಯ ಮತ್ತು ಅವಮಾನ ಎದುರಿಸುವಂತಾಗಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318 (ವಂಚನೆ) ಅಡಿಯಲ್ಲಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತುದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement