
ಬೆಂಗಳೂರು: ನಗರದ ಹೊರವಲಯದಲ್ಲಿ 26 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿ, ಆಕೆಯ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಮಾನಸ ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೊಂದ ನಂತರ, ಆರೋಪಿ ಶಂಕರ್ ಕತ್ತರಿಸಿದ ತಲೆಯೊಂದಿಗೆ ತನ್ನ ಸ್ಕೂಟರ್‌ನಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿದ್ದಾನೆ ಮತ್ತು ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.
ಆರೋಪಿಯನ್ನು ನಂತರ ಬಂಧಿಸಲಾಯಿತು. ಶುಕ್ರವಾರ ತಡರಾತ್ರಿ ಆನೇಕಲ್ ತಾಲ್ಲೂಕಿನ ಚಂದಾಪುರ ಬಳಿಯ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದಂಪತಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ನಾಲ್ಕು ವರ್ಷದ ಮಗಳು ಇದ್ದಾಳೆ. ಇಬ್ಬರೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಕೋರಮಂಗಲದಲ್ಲಿ ಕೆಲಸ ಮಾಡುತ್ತಿದ್ದರೆ, ಮಾನಸಾ ಬೊಮ್ಮಸಂದ್ರದಲ್ಲಿ ಕೆಲಸ ಮಾಡುತ್ತಿದ್ದರು.
ವಿಚಾರಣೆ ಸಮಯದಲ್ಲಿ, ಇತ್ತೀಚೆಗೆ ತನ್ನ ಪತ್ನಿಗೆ ಬೇರೊಬ್ಬರ ಜೊತೆ ಸಂಬಂಧ ಇರುವುದು ಪತ್ತೆಯಾಗಿದ್ದು, ಇದರಿಂದಾಗಿ ನಮ್ಮ ನಡುವೆ ಜಗಳವಾಗಿತ್ತು. ನಂತರ ಆಕೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ, ತಮ್ಮ ಮಗಳಿಗಾಗಿ ರಾಜಿ ಮಾಡಿಕೊಳ್ಳಲು ಆಕೆ ಮನೆಗೆ ಮರಳಿದ್ದಳು ಎಂದು ಶಂಕರ್ ಪೊಲೀಸರಿಗೆ ತಿಳಿಸಿದ್ದಾನೆ.
ತನಗೆ ಯಾವುದೇ ವಿವಾಹೇತರ ಸಂಬಂಧವಿಲ್ಲ ಎಂದು ಸಂತ್ರಸ್ತೆ ವಾದಿಸಿದ್ದು, ದಂಪತಿ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆತ ಕುಡುಗೋಲು ತೆಗೆದುಕೊಂಡು ಆಕೆಯ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆತ ಕತ್ತರಿಸಿದ ತಲೆಯೊಂದಿಗೆ ಸ್ಕೂಟರ್‌ನಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಶಂಕರ್ ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ ಮತ್ತು ಅದಕ್ಕಾಗಿಯೇ ಆತ ತನ್ನ ಮನೆಯ ಸಮೀಪವೇ ಇದ್ದ ಅಂಗಡಿಯಿಂದ ಕುಡುಗೋಲು ಖರೀದಿಸಿದ್ದಾನೆ ಎಂದು ಅವರು ಹೇಳಿದರು.
ನಾವು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಆರೋಪಿಯನ್ನು ಬಂಧಿಸಿದ್ದೇವೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.
Advertisement