
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಎರಡು ವರ್ಷಗಳನ್ನು ಪೂರೈಸಿದ್ದು, ಯೋಜನೆಯಡಿ ಈ ವರೆಗೂ 475 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಸಾರಿಗೆ ನಿಗಮಗಳಿಗೆ 11,994 ಕೋಟಿ ರೂ. ಮೌಲ್ಯದ ಟಿಕೆಟ್‌ಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಜಾರಿಗೆ ತಂಡ ಮೊದಲ ಗ್ಯಾರಂಟಿ ಯೋಜನೆ ಇದಾಗಿದ್ದು, ಯೋಜನೆಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೋಜನೆಯು ಮಹಿಳಾ ಪ್ರಯಾಣಿಕರ ಸಂಖ್ಯೆಯನ್ನಷ್ಟೇ ಅಲ್ಲದೆ, ಪುರುಷ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಲು ಸಹಾಯ ಮಾಡಿದೆ ಎಂದು ಸಾರಿಗೆ ಸಂಸ್ಥೆ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಶಕ್ತಿ ಯೋಜನೆಗಳು ಇತರ ರಾಜ್ಯಗಳ ಗಮನವನ್ನೂ ಸೆಳೆದಿದ್ದು, ಆಂಧ್ರಪ್ರದೇಶದ ಸಾರಿಗೆ ನಿಗಮದ ಅಧಿಕಾರಿಗಳೂ ಕೂಡ ರಾಜ್ಯಕ್ಕೆ ಭೇಟಿ ನೀಡಿ, ಯೋಜನೆ ಅನುಷ್ಠಾನ, ಸವಾಲುಗಳು, ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.
ಈ ಯೋಜನೆಯು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆಯನ್ನು ಹೆಚ್ಚಿಸಿದ್ದು, ಇದರಿಂದ ಪ್ರವಾಸೋದ್ಯಮಕ್ಕೂ ಲಾಭವಾಗುವಂತೆ ಮಾಡಿದೆ. ಸರ್ಕಾರವು ಯೋಜನೆ ಮುಂದುವರೆಸುವುದಾಗಿ ಹೇಳಿದೆ.
2023 ಜೂನ್ 11 ರಿಂದ 2025 ಜೂನ್ 10 ವರೆಗೂ ಕರ್ನಾಟಕ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 4,74,82,49,843 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅಂದರೆ, ನಿತ್ಯ ಸರಾಸರಿ 65 ಲಕ್ಷ ಮಹಿಳೆಯರು ಈ ಸೌಲಭ್ಯ ಪಡೆದಂತಾಗಿದೆ.
2023 ಜೂನ್ 11 ರಿಂದ 2025 ಜೂನ್ 10 ವರೆಗೂ ಮಹಿಳೆಯರಿಗೆ ಉಚಿತವಾಗಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 11994,37,89,779 (11994 ಕೋಟಿ) ರೂ. ಮೊತ್ತದ ಟಿಕೆಟ್ ನೀಡಲಾಗಿದೆ. ಅಂದರೆ, ಕಳೆದ 2 ವರ್ಷದಲ್ಲಿ ಮಹಿಳೆಯರಿಗೆ ಸರಾಸರಿ ನಿತ್ಯ 16.5 ಕೋಟಿ ರೂಪಾಯಿ ಉಚಿತ ಟಿಕೆಟ್ ನೀಡಲಾಗುತ್ತಿದೆ. ಈ ಎಲ್ಲಾ ಮೊತ್ತವನ್ನು ಸರ್ಕಾರವು ನಾಲ್ಕು ಸಾರಿಗೆ ನಿಗಮಗಳಿಗೆ ನೀಡಲಿದೆ.
ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ (ಜೂನ್ 11, 2023 ರಿಂದ ಜೂನ್ 10, 2025 ರವರೆಗೆ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯೂಕೆಆರ್‌ಟಿಸಿ) - ನಾಲ್ಕು ನಿಗಮಗಳ ಅಡಿಯಲ್ಲಿ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗಳಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ (ಪುರುಷರು ಸೇರಿದಂತೆ) 801.54 ಕೋಟಿಯಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.
ನಾಲ್ಕು ಬಸ್ ನಿಗಮಗಳಲ್ಲಿ ಬಿಎಂಟಿಸಿಯಲ್ಲಿ 150 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರೆ, ಕೆಎಸ್‌ಆರ್‌ಟಿಸಿ 144 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ 68 ಕೋಟಿ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಬಸ್ ನಲ್ಲಿ 111 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯದಲ್ಲಿ, ಕೆಎಸ್‌ಆರ್‌ಟಿಸಿ 4,556 ಕೋಟಿ ರೂ.ಗಳೊಂದಿಗೆ ಮೊದಲ ಸ್ಥಾನದಲ್ಲಿದೆ, ನಂತರ ಎನ್‌ಡಬ್ಲ್ಯೂಆರ್‌ಟಿಸಿ 2,968 ಕೋಟಿ ರೂ, ಕೆಕೆಆರ್‌ಟಿಸಿ 2,408 ಕೋಟಿ ರೂ. ಮತ್ತು ಬಿಎಂಟಿಸಿ 2,061 ಕೋಟಿ ರೂ.ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ರಾಜ್ಯ ಸರ್ಕಾರ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡುವುದಾಗಿ ಹೇಳಿತ್ತು. ಆದರೆ, ಇನ್ನೂ ವಿತರಣೆ ಮಾಡಿಲ್ಲ. ಹೀಗಾಗಿ ಮಹಿಳಾ ಪ್ರಯಾಣಿಕರು ಆಧಾರ್ ಕಾರ್ಡ್ ಬಳಸಿ ಉಚಿತ ಪ್ರಯಾಣದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
Advertisement