
ಬೆಂಗಳೂರು: ಮಹದೇವಪುರದ ಅಪಾರ್ಟ್ಮೆಂಟ್ವೊಂದರಲ್ಲಿ ಮಹಿಳೆಯೊಬ್ಬಳು ತಾನು ಸಾಕಿದ್ದ ನಾಯಿಯನ್ನೇ ಹತ್ಯೆ ಮಾಡಿ, ಕೊಳೆತು ನಾರುತ್ತಿದ್ದ ನಾಯಿಯ ಮೃತದೇಹದೊಂದಿಗೆ ವಾಸವಿದ್ದ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ.
38 ವರ್ಷದ ಮಹಿಳೆ ತ್ರಿಪರ್ಣಾ ಪೈಕ್ ದೊಡ್ಡಾನೆಕುಂದಿಯ ಅಕ್ಮೆ ಬ್ಯಾಲೆಟ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್ ಸಂಖ್ಯೆ ಜೆ-404 ರಲ್ಲಿ ವಾಸವಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘವು ಅವರ ಫ್ಲಾಟ್‌ನಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಬಿಬಿಎಂಪಿಗೆ ದೂರು ನೀಡಿದ್ದರು.
ದೂರು ಹಿನ್ನೆಲೆಯಲ್ಲಿ ಪಶುಸಂಗೋಪನಾ ತಂಡ ಫ್ಲಾಟ್‌ಗೆ ಭೇಟಿ ನೀಡಿದ್ದು, ಈ ವೇಳೆ ಮಹಿಳೆ ಅಧಿಕಾರಿಗಳು ಮನೆ ಪ್ರವೇಶಿಸಲು ನಿರಾಕರಿಸಿದ್ದಾರೆ. ಬಳಿಕ ಅಧಿಕಾರಿಗಳು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ.
ಈ ವೇಳೆ ಹೊಯ್ಸಳ ಗಸ್ತು ತಿರುಗುವ ತಂಡ ಸ್ಥಳಕ್ಕೆ ಬಂದು ಬಿಬಿಎಂಪಿ ತಂಡವನ್ನು ಒಳಗೆ ಬಿಡುವಂತೆ ಮನವೊಲಿಸಿತು. ಅವರು ಒಳಗೆ ಹೋದಾಗ, ದುರ್ವಾಸಣೆ ಬರುತ್ತಿರುವುದು ಕಂಡು ಬಂದಿದೆ. ಅಲ್ಲದೆ, ಎರಡು ನಾಯಿಗಳನ್ನು ಸರಿಯಾಗಿ ನೋಡಿಕೊಳ್ಳದಿರುವುದೂ ಕಂಡು ಬಂದಿದೆ.
ಈ ನಡುವೆ ದುರ್ವಾಸನೆಯ ಮೂಲ ಪತ್ತೆಗೆ ಮುಂದಾದಾಗ ಕೊಳೆತು ನಾರುತ್ತಿದ್ದ ನಾಯಿಯ ಶವವೊಂದು ಪತ್ತೆಯಾಗಿದೆ.
ಕೊಠಡಿಯಲ್ಲಿ ಬಚ್ಚಿಟ್ಟಿದ್ದ ನಾಯಿಯ ಮೃತದೇಹದ ಸುತ್ತಮುತ್ತ ದೇವರ ಫೋಟೊಗಳಿದ್ದು, ವಾಮಾಚಾರಕ್ಕಾಗಿ ಸಾಕು ನಾಯಿಯನ್ನು ಹತ್ಯೆಗೈದಿರುವುದಾಗಿ ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಅವಿವಾಹಿತ ಮತ್ತು ಒಂಟಿಯಾಗಿರುವ ಮಹಿಳೆ ಖಿನ್ನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಬಿಬಿಎಂಪಿ ತಂಡ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಆಕೆಯ ಪೋಷಕರು ಬಂದು ಅಧಿಕಾರಿಗಳೊಂದಿಗೆ ಮಾತನಾಡಿದರು.
ತ್ರಿಪರ್ಣ ನಗರದಲ್ಲಿ ಇನ್ಫೋಟೆಕ್ ಕಂಪನಿಯನ್ನು ಪ್ರಾರಂಭಿಸಿದ್ದರು, ಆದರೆ ಕೋವಿಡ್ ಸಮಯದಲ್ಲಿ ನಷ್ಟ ಎದುರಾಗಿ ಕಂಪನಿಯನ್ನು ಮುಚ್ಚಬೇಕಾಯಿತು. ಬಳಿಕ ಮಹಿಳೆ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಖಿನ್ನತೆಯಿಂದ ಬಳಲುತ್ತಿದ್ದ ಈಕೆ ಹೊರಗಿನವರೊಂದಿಗನ ಸಂಪರ್ಕವನ್ನು ಕಳೆದುಕೊಂಡಿದ್ದರು. ಅಲ್ಲದೆ, ಅಪಾರ್ಟ್ಮೆಂಟ್ನಲ್ಲಿ ಇತರ ನಿವಾಸಿಗಳೊಂದಿಗೂ ಉತ್ತಮ ಸಂಬಂಧವನ್ನು ಉಳಿಸಿಕೊಂಡಿರಲಿಲ್ಲ. ತಾನು ಸಾಕಿದ್ದ ಎರಡು ನಾಯಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ.
ಈ ನಡುವೆ 2 ದಿನಗಳ ಹಿಂದೆ ಒಂದು ನಾಯಿ ಸತ್ತು ಹೋಗಿದ್ದು, ನಾಯಿಯ ಅಂತ್ಯ ಸಂಸ್ಕಾರದ ಬದಲು ಮಹಿಳೆ ಮೃತದೇಹವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದರಿಂದ ದುರ್ವಾಸನೆ ಬರುತ್ತಿತ್ತು. ನಾಯಿ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದೆ ಎಂದು ಭಾವಿಸಲಾಗಿದೆ. ಮಹಿಳೆ ನಾಯಿಯ ಮೃತದೇಹವನ್ನು ಹೊರತೆಗೆಯಲು ಹೆದರುತ್ತಿದ್ದರಿಂದ ಅಥವಾ ತುಂಬಾ ದುಃಖಿತಳಾಗಿದ್ದರಿಂದ ಶವವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಾಳೆ. ಪರಿಶೀಲನೆ ವೇಳೆ ಆಕೆ ನಮ್ಮೊಂದಿಗೆ ಮಾತನಾಡುವ ಮನಸ್ಥಿತಿಯಲ್ಲಿರಲಿಲ್ಲ. ನಾಯಿಯ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ.
ಮಾಟಮಂತ್ರಕ್ಕಾಗಿ ಆಕೆ ನಾಯಿಯನ್ನು ಕೊಂದಿದ್ದಾಳೆಂಬ ವದಂತಿಗಳಿವೆ. ಆದರೆ ಅದನ್ನು ಸಾಬೀತುಪಡಿಸಲು ನಮಗೆ ಯಾವುದೇ ಪುರಾವೆಗಳು ಸಿಗಲಿಲ್ಲ. ಅವಳೊಂದಿಗೆ ಇನ್ನೂ ಎರಡು ನಾಯಿಗಳು ಇದ್ದವು ಮತ್ತು ಅವುಗಳನ್ನು ಪಶುಸಂಗೋಪನಾ ತಂಡದ ವಶಕ್ಕೆ ನೀಡಲಾಗಿದೆ. ಮತ್ತೊಂದು ನಾಯಿಯನ್ನು ಕೊಂದ ಆರೋಪ ಕೂಡ ಆಕೆಯ ಮೇಲೆ ಕೇಳಿ ಬಂದಿದ್ದು, ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಮಹಿಳೆಯನ್ನು ಇನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿಯಲ್ಲಿ ಬಿಎನ್‌ಎಸ್‌ಯ ವಿವಿಧ ವಿಭಾಗಗಳ ಅಡಿಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement