
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬಯಲಿಗೆ ಬಂದಿದ್ದು, ಮಹಿಳೆಯನ್ನು ಕೊಂದು ಹಾಕಿರುವ ದುಷ್ಕರ್ಮಿಗಳು ಶವವನ್ನು ಮೂಟೆಕಟ್ಟಿ ಕಸದ ಲಾರಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಈ ಘಟನೆ ನಡೆದಿದ್ದು, ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ತಡರಾತ್ರಿ ಆಟೋದಲ್ಲಿ ಮಹಿಳೆ ಶವ ತಂದಿದ್ದ ದುಷ್ಕರ್ಮಿಗಳು, ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿಟ್ಟು ಪರಾರಿ ಆಗಿದ್ದಾರೆ.
30 ರಿಂದ 35 ವರ್ಷದ ಮಹಿಳೆ ಗುರುತು ಪತ್ತೆಗಾಗಿ ಪೊಲೀಸರಿಂದ ತನಿಖೆ ನಡೆದಿದ್ದು, ಅಪರಿಚಿತ ಮಹಿಳೆ ಶವ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಕಸ ಹಾಕಲು ಬಂದಿದ್ದ ವ್ಯಕ್ತಿಯಿಂದ ಪೊಲೀಸರಿಗೆ ಮಾಹಿತಿ
ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದರು. ಈ ವೇಳೆ ಯುವತಿಯ ತಲೆ ಕೂದಲು ಕಾಣಿಸಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಶವದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ರಸ್ತೆಯಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಒಬ್ಬನೇ ದುಷ್ಕರ್ಮಿ ಆಟೋದಲ್ಲಿ ಬಾಡಿ ತಂದು ಬಿಸಾಡಿರುವುದು ತಿಳಿದುಬಂದಿದೆ. ಹಂತಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ಸಿ ವಂಶಿ ಕೃಷ್ಣ ಈ ಬಗ್ಗೆ ಮಾತನಾಡಿ, 'ಬೆಳಗಿನ ಜಾವ 1 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯ ನಡುವೆ ಶವದ ಚೀಲವನ್ನು ಕಸದ ಲಾರಿಯಲ್ಲಿ ಎಸೆಯಲಾಗಿದೆ ಎಂದು ತಿಳಿಸಿದ್ದಾರೆ.
"ಮಹಿಳೆಯ ಕೈ ಮತ್ತು ಕುತ್ತಿಗೆಯನ್ನು ಕಟ್ಟಿಹಾಕಲಾಗಿತ್ತು ಮತ್ತು ಶವವನ್ನು ಗೋಣಿ ಚೀಲದಲ್ಲಿ ಇರಿಸಲಾಗಿತ್ತು. ಬಿಬಿಎಂಪಿ ಸಿಬ್ಬಂದಿ ಶವದ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ನಾವು ಕೊಲೆ ಪ್ರಕರಣ ದಾಖಲಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.
Advertisement