
ಮೈಸೂರು: ಚಾಮರಾಜನಗರ ಜಿಲ್ಲೆಯ ಅರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಸತ್ತ ಹಸುವಿಗೆ ವಿಷವಿಕ್ಕಿದ್ದೇ ಕಾರಣ ಎಂಬುದು ದೃಢಪಟ್ಟಿದ್ದು, ಈ ನಡುವೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಕೂಡ ಹುಲಿಗಳ ಸಾವಿಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರತೊಡಗಿದೆ.
ಮೇಯಲು ಬಿಟ್ಟಿದ್ದ ದನವೊಂದನ್ನು ಹುಲಿ ದಾಳಿ ಮಾಡಿ, ಕೊಂದು ಹಾಕಿತ್ತು. ಇದರಿಂದ ಕೋಪಗೊಂಡಿದ್ದ ದನದ ಮಾಲೀಕ ಹಸುವಿನ ಕಳೇಬರಕ್ಕೆ ವಿಷ ಸುರಿದು ಬಿಟ್ಟು ಬಂದಿದ್ದ. ಆನಂತರ, ಹೆಣ್ಣು ಹುಲಿ ತನ್ನ ನಾಲ್ಕು ಮರಿಗಳೊಂದಿಗೆ ಅಲ್ಲಿಗೆ ಬಂದು ವಿಷ ಹಾಕಲಾಗಿದ್ದ ಹಸುವಿನ ಮಾಂಸವನ್ನು ತಿಂದು ಮೃತಪಟ್ಟಿದ್ದವು.
ಘಟನೆಗೆ ಸಂಬಂಧಿಸಿ ವಿಷ ಹಾಕಿದ್ದ ಕಳ್ಳಬ್ಬೆದೊಡ್ಡಿ ಗ್ರಾಮದ ಶಿವಣ್ಣ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆತನ ಜೊತೆಗೆ, ಇತರ ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಚಾಮರಾಜನಗರ ಮತ್ತು ತಮಿಳುನಾಡು ಗಡಿಭಾಗದಲ್ಲಿ ದನಗಳನ್ನು ಕಾಡಿಗೆ ಮೇಯಲು ಬಿಡುವ ಪರಿಪಾಠ ಇದೆ. ಮೇಯಲು ಬಿಟ್ಟ ದನಗಳನ್ನು ಹುಲಿಗಳು ಹಿಡಿದು ತಿನ್ನುವುದು ಕೂಡ ಸಾಮಾನ್ಯವೇ. ಇದೇ ವೇಳೆ, ದನಗಳನ್ನು ಪ್ರತಿ ಬಾರಿ ಹುಲಿ ತಿನ್ನುತ್ತೆ ಎನ್ನುವ ಕೋಪದಲ್ಲಿ ಸ್ಥಳೀಯರು ಸೇರಿ ಸತ್ತ ದನಕ್ಕೆ ವಿಷ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸ್ಥಳೀಯವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಅರಣ್ಯದಲ್ಲಿ ಕಾವಲು ಕಾಯುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಮೂರು ತಿಂಗಳಿನಿಂದ ಗುತ್ತಿಗೆ ಕಾರ್ಮಿಕರಾಗಿ ಅರಣ್ಯ ಇಲಾಖೆ ಪರವಾಗಿ ದುಡಿಯುತ್ತಿರುವ ಜನರಿಗೆ ವೇತನ ಪಾವತಿಯಾಗುತ್ತಿಲ್ಲ. ಹೀಗಾಗಿ ಯಾವಾಗಲೊಮ್ಮೆ ಕಾಡಿಗೆ ಬಂದು ಅರಣ್ಯ ವೀಕ್ಷಿಸುವುದನ್ನು ಮಾಡುತ್ತಿದ್ದಾರೆ.
ಇದೇ ಕಾರಣದಿಂದ ವನ್ಯಪ್ರಾಣಿಗಳ ಮತ್ತು ಸ್ಥಳೀಯ ಜನರ ನಡುವೆ ಸಂಘರ್ಷ ಏರ್ಪಟ್ಟಿದ್ದರೂ ಅಧಿಕಾರಿಗಳು ಮೌನ ತಾಳಿದ್ದರು ಎನ್ನಲಾಗಿದೆ.
ಅರಣ್ಯ ಪಾಲಕರು ಕೂಡ ಗೊಡವೆಗೆ ಹೋಗಿರಲಿಲ್ಲ. ಇದರ ಪರಿಣಾಮದಿಂದಲೇ ಐದು ಹುಲಿಗಳು ಸಾವಿಗೀಡಾಗಿವೆ ಎಂಬ ಮಾತು ಕೇಳಿಬಂದಿದೆ.
ಸ್ಥಳೀಯರು ಹುಲಿ ದಾಳಿ ಮಾಡಿದ್ದ ಹಸುವಿಗೆ ವಿಷ ಪ್ರಾಶನ ಮಾಡಿದ್ದರಿಂದಲೇ ಹುಲಿಗಳು ಜೀವ ಬಿಟ್ಟಿವೆ ಎಂದು ಸಿಸಿಎಫ್ ಹೀರಾಲಾಲ್ ಅವರು ಹೇಳಿದ್ದಾರೆ.
ಮೂರು ದಿನದ ಹಿಂದೆ ಹಸುವಿಗೆ ವಿಷ ಹಾಕಿರುವುದು ಕಂಡುಬಂದಿದೆ. ವೈದ್ಯರು ಹುಲಿಗಳ ಮರಣೋತ್ತರ ಪರೀಕ್ಷೆ ಮಾಡಿದ್ದು ಇದರಲ್ಲಿ ವಿಷಪ್ರಾಶನದಿಂದ ಈ ಕೃತ್ಯ ಆಗಿದೆ ಎಂದು ಹೇಳಿದ್ದಾರೆ.
ಇನ್ನು ಮೂರು ತಿಂಗಳಿನಿಂದ ಗುತ್ತಿಗೆಯಲ್ಲಿರುವ ಅರಣ್ಯ ಪಾಲಕ ಸಿಬ್ಬಂದಿ ಸಂಬಳ ಆಗಿರಲಿಲ್ಲ. ಇದನ್ನು ವಿರೋಧಿಸಿ ಸಿಬ್ಬಂದಿಗಳು ಸೋಮವಾರ ಮುಷ್ಕರ ನಡೆಸಿದ್ದರು. ಕಾಡಿನಲ್ಲಿ ಸಿಬ್ಬಂದಿ ಇಲ್ಲದಿರುವುದನ್ನೇ ಲಾಭವಾಗಿ ಬಳಸಿಕೊಂಡಿದ್ದ ಆರೋಪಿಗಳಾದ ಮಾದರಾಜ, ಕುಣಪ್ಪ ಮತ್ತು ನಾಗರಾಜ್ ಹುಲಿಗಳಿಂದ ಈಗಾಗಲೇ ಕೊಲ್ಲಲ್ಪಟ್ಟ ಹಸುವಿನ ಮೃತದೇಹಕ್ಕೆ ವಿಷ ಸುರಿದಿದ್ದರು.
ಹಸು ಮೃತಪಟ್ಟ 2-3 ದಿನಗಳ ಬಳಿಕ ಹುಲಿಗಳು ಮಾಂಸ ಸೇವನೆಗೆ ಹಸುವಿನ ಬಳಿ ಬರುತ್ತದೆ ಎಂಬುದು ಅವರಿಗೆ ತಿಳಿದಿದ್ದರು. ಈ ಕ್ಷಣಕ್ಕಾಗಿ ಕಾದು ಕುಳಿದು ವಿಷ ಹಾಕಿ, ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂದು ಮೂಲಗಳು ತಿಳಿಸಿವೆ.
ಸ್ಥಳದ ಪ್ರಮುಖ ನಾಯಕ ಶಿವಣ್ಣ ಅವರ ಪುತ್ರ ಮಾದರಾಜ ಅವರ ಬಂಧನವು ಸ್ಥಳೀಯರನ್ನು ಆಘಾತಗೊಳಿಸಿದೆ.
ತನಿಖೆಗಿಳಿದಿದ್ದ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಶಿವಣ್ಣ, ಹುಲಿಗಳ ಸಾವಿಗೆ ನಾನೇ ಕಾರಣ ಎಂದು ಹೇಳಿಕೊಂಡಿದ್ದು, ಆದರೆ, ಮದರಾಜನ ಕೈವಾಡವನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಗಳಿರುವ ಕಾರಣ, ಶಿವಣ್ಣ ಅವರನ್ನು ಬಂಧಿಸಲು ನಿರಾಕರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಗ್ರಾಮದಲ್ಲಿ ಹಲವು ದನಗಳು ಸಾವನ್ನಪ್ಪಿದ್ದವು. ಈ ಸಾವಿಗೆ ಚಿರತೆಗಳು ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ, ಹುಲಿ ಬೇಟಿಯಾಡಿರುವುದು ತಿಳಿದು ಆಘಾತವಾಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹುಲಿಗಳ ದಾಳಿಯಿಂದ ಕುಟುಂಬಸ್ಥರನ್ನು ಕಳೆದುಕೊಂಡವರಿಗೂ ಅರಣ್ಯ ಇಲಾಖೆ ಪರಿಹಾರವನ್ನು ನೀಡಿಲ್ಲ. ಇದು ಗ್ರಾಮಸ್ಥರು ಮತ್ತಷ್ಟು ಕೋಪಗೊಳ್ಳುವಂತೆ ಮಾಡಿದೆ. ಮುನಿ ಎಂಬಾತನ್ನು ಆನೆ ತುಳಿದು ಹತ್ಯೆ ಮಾಡಿತ್ತು. ಆದರೆ, ಆತನ ಕುಟುಂಬಕ್ಕೆ ಇನ್ನೂ ಪರಿಹಾರ ನೀಡಿಲ್ಲ. ಚಿರತೆಗಳ ದಾಳಿಗೆ ಹಸುಗಳು ಸಾವನ್ನಪ್ಪಿದ್ದರೂ ಅರಣ್ಯಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement