
ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಜಿಂಕೆಗಳು ಮತ್ತು ಕಾಡು ಹಂದಿಗಳನ್ನು ಬೇಟೆಯಾಡಿ ಅವುಗಳ ಮಾಂಸ, ಚರ್ಮ, ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಮಾಂಸಕ್ಕಾಗಿ ಜಿಂಕೆ ಹತ್ಯೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಬೆಂಗಳೂರು ನಗರ ಅರಣ್ಯಾಧಿಕಾರಿಗಳು, 4 ಜಿಂಕೆ ಹಾಗೂ ಮತ್ತು 1 ಕಾಡು ಹಂದಿ ಮತ್ತು 74 ಕೆಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸುತ್ತಿದ್ದ 2 ಬಂದೂಕು, 2 ಕಾರು, ಬೈಕ್'ನ್ನು ಜಪ್ತಿ ಮಾಡಿದ್ದಾರೆ.
ವನ್ಯಜೀವಿ ಮಾಂಸ ವ್ಯಾಪಾರಕ್ಕಾಗಿ ಆರೋಪಿಗಳು ಒಂಬತ್ತು ಜಿಂಕೆ ಮತ್ತು ಒಂದು ಕಾಡುಹಂದಿಯನ್ನು ಕೊಂದಿದ್ದು, ಸುಳಿವಿನ ಆಧಾರದ ಮೇಲೆ ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದ ತಂಡವು ಕಗ್ಗಲಿಪುರ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಶನಿವಾರ ತಡರಾತ್ರಿ ಬನ್ನೇರುಘಟ್ಟ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಬಳಿ ಎರಡು ಕಾರುಗಳನ್ನು ತಡೆಹಿಡಿದು. ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮೂವರು ಶಂಕಿತರು ಪರಾರಿಯಾಗಿದ್ದು, ಓರ್ವ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರತಾಪ್ (31) ಎಂದು ಗುರ್ತಿಸಲಾಗಿದೆ.
ಅರಣ್ಯ ಅಧಿಕಾರಿಗಳು ಸಿಕೆ ಪಾಳ್ಯ ಬಳಿ ಸುಮಾರು 74 ಕೆಜಿ ಜಿಂಕೆ ಮಾಂಸ ಮತ್ತು ಆರು ಚುಕ್ಕೆ ಜಿಂಕೆಗಳ ಚರ್ಮವನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಹೆಚ್ಚುವರಿಯಾಗಿ, ಒಂದು ಡಬಲ್ ಬ್ಯಾರೆಲ್ ಮತ್ತು ಒಂದು ಸಿಂಗಲ್ ಬ್ಯಾರೆಲ್ ರೈಫಲ್ ಜೊತೆಗೆ 10 ಜೀವಂತ ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಈ ಗ್ಯಾಂಗ್ ಎಷ್ಟು ಸಮಯದಿಂದ ಸಕ್ರಿಯವಾಗಿದೆ ಮತ್ತು ಬೇಟೆ ಜಾಲದಲ್ಲಿ ಬೇರೆ ಯಾರು ಭಾಗಿಯಾಗಿರಬಹುದು ಎಂಬುದರ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Advertisement