
ಬೆಂಗಳೂರು: ಕುಡಿಯುವ ನೀರು ಹಿಡಿಯುವ ವೇಳೆ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ, ಮೃತ ಮಹಿಳೆಯ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು 5 ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ.
ಬೆಳಗ್ಗೆ 5.30 ಸುಮಾರಿಗೆ ಕಾವೇರಿ ನೀರು ಹಿಡಿಯುವಾಗ ಅವಘಡ ಸಂಭವಿಸಿದ್ದು, ಸೆಲ್ವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಮೇನ್ ಲೈನ್ನಿಂದ ಮೋಟಾರ್ ಆನ್ ಮಾಡುವಾಗ ಅವಘಡ ಸಂಭವಿಸಿದೆ.
ಚಾಮರಾಜಪೇಟೆ ಆನಂದಪುರದಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.
ದೊಡ್ಡ ಪೈಪ್ನಲ್ಲಿ ಅಲ್ಲಲ್ಲಿ ಮೋಟರ್ ಕನೆಕ್ಷನ್ ನಿಡಲಾಗಿದ್ದು, ಮೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಮೃತಪಟ್ಟಿದ್ದಾಳೆಂದು ವರದಿಗಳು ತಿಳಿಸಿವೆ,
ಮೃತ ಮಹಿಳೆಗೆ ಮೃತ ಸೆಲ್ವಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡ ಈ ಹಿಂದೆಯೇ ಮೃತಪಟ್ಟಿದ್ದು, ಓರ್ವ ಮಗಳಿಗೆ ಮದುವೆ ಮಾಡಿದ್ದಾಳೆ. ಮನೆ ಕೆಲಸ ಮಾಡಿ ಮಕ್ಕಳನ್ನು ಸಲಹುತ್ತಿದ್ದರು ಎನ್ನಲಾಗಿದೆ.
ಘಟನೆ ಬೆನ್ನಲ್ಲೇ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪರಿಣಾಮ ಕೆ.ಆರ್.ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಎದುರಾಗಿ, ಸವಾರರು ಕೆಲಕಾಲ ಪರದಾಡುವಂತಾಗಿತ್ತು.
ಈ ನಡುವೆ ಸ್ಥಳೀಯರು ಶಾಸಕ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿ ಹೆಚ್ಚಾಗಿ ಹಿಂದೂಗಳು ವಾಸ ಮಾಡುತ್ತಿದ್ದಾರೆ. ಪಕ್ಕದಲ್ಲಿರುವ ಟಿಪ್ಪು ನಗರ ನೋಡಿ. ಅಲ್ಲಿ ಹೆಚ್ಚಾಗಿ ಮುಸ್ಲಿಮರಿದ್ದಾರೆ. ಅವರಿಗೆ ಮನೆ ಮನೆಗೂ ನೀರಿನ ವ್ಯವಸ್ಥೆ ಇದೆ. ಕೇಳಿದರೆ ಇದು ಸ್ಲಂ ಎಂದು ಹೇಳುತ್ತಾರೆ, ನಾವು ವೋಟ್ ಹಾಕಿಲ್ವಾ? ಇಲ್ಲಿ ನೀರು, ಚರಂಡಿ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿ ಜೀವ ಪಣಕ್ಕೆ ಇಡಬೇಕಾದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪ್ರತಿಭಟನಾನಿರತ ಜನರು ಜಮೀರ್ ಅವರಿಗೆ ಮುತ್ತಿಗೆ ಹಾಕಿ ಸಮಸ್ಯೆ ಕುರಿತು ಧ್ವನಿ ಎತ್ತಿದರು.
ಬಳಿಕ ಸಚಿವರು ಮೃತಳ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದರು. ಮನೆ ಮನೆಗೆ ಮೋಟಾರು ಹಾಕಿಕೊಂಡಿದ್ದಾರೆ. ಅನಧಿಕೃತವಾಗಿ 3 ರಿಂದ 4 ಪ್ಲೋರ್ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ನೀರು ಮೇಲೆ ಹತ್ತದ ಕಾರಣ ಅಕ್ರಮವಾಗಿ ಮೋಟಾರಗಳನ್ನು ಬಳಸಿ ವಿದ್ಯುತ್ ಕಂಬದಿಂದ ಮೋಟಾರುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸಿ ನೀರು ಪಡೆದುಕೊಳ್ಳುತ್ತಿದ್ದಾರೆ. 15 ದಿನದ ಹಿಂದೆ ಬಂದು ಮನೆ ಮನೆಗೆ ಕಾವೇರಿ ನೀರು ನೀಡುವ ಯೋಜನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. ಅನಾಹುತ ಆಗಬಾರದಿತ್ತು ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement