
ಬೆಂಗಳೂರು: ಬಹುನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಜೆಟ್ ಈ ವಾರ ಮಾರ್ಚ್ 27 ಅಥವಾ ಮಾರ್ಚ್ 28 ರಂದು ಮಂಡನೆಯಾಗುವ ಸಾಧ್ಯತೆಗಳಿವೆ.
ಕಳೆದ ವರ್ಷ 2024-25ರಲ್ಲಿ ಬಿಬಿಎಂಪಿ 12,371.63 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿತ್ತು. (ಬಜೆಟ್ ಗಾತ್ರವನ್ನು 13,114 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿತ್ತು). ಪ್ರಸಕ್ತ ಸಾಲಿನಲ್ಲಿ ಬಜೆಟ್ ಗಾತ್ರ 18 ಸಾವಿರ ಕೋಟಿ ರೂಗಿಂತ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಶಾಸಕರೊಂದಿಗೆ ಬಜೆಟ್ ಸಭೆಯನ್ನು ನಗರಸಭೆ ಇಂದು ನಿಗದಿಪಡಿಸಿದ್ದು, ಬೆಂಗಳೂರಿನ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವರ್ಷದ ಬಜೆಟ್'ನಲ್ಲಿ ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಟೆಕ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರು ಮತ್ತು ಜಲ ಭದ್ರತಾ ಬೆಂಗಳೂರು ಮತ್ತು ಬ್ರ್ಯಾಂಡ್ ಬೆಂಗಳೂರು ಸೇರಿದಂತೆ ಎಂಟು ವಿಭಾಗಗಳಿಗೆ ಬಜೆಟ್ ಹಂಚಿಕೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಪ್ರಸಕ್ತ ಸಾಲಿನ ಬಜೆಟ್'ನಲ್ಲಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಿದ್ದು, ಪ್ರಮುಖ ರಸ್ತೆಗಳನ್ನು ಸಿಗ್ನಲ್ ಮುಕ್ತಗೊಳಿಸುವ ಹಾಗೂ ನಗರವನ್ನು ತೀವ್ರ ಕಾಡುತ್ತಿರುವ ಘನತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಕೇಂದ್ರೀಕರಿಸುತ್ತದೆ.
ಕಳೆದ ಬಾರಿಯ ಬಜೆಟ್‌ನಲ್ಲಿ ನಗರದಲ್ಲಿ ಭಾರೀ ಸಂಚಾರ ದಟ್ಟಣೆ ಇರುವ ಎರಡು ಸ್ಥಳಗಳಲ್ಲಿ ಸುರಂಗ ಯೋಜನೆ ಸೇರಿದಂತೆ ವಿವಿಧ ರಸ್ತೆ ಯೋಜನೆಗಳಿಗೆ ಡಿಪಿಆರ್ ಸಿದ್ಧಪಡಿಸಲು 200 ಕೋಟಿ ರೂ.ಗಳ ಅನುದಾನವನ್ನು ಕಾಯ್ದಿರಿಸಲಾಗಿತ್ತು.
ಸುರಂಗ ಮಾರ್ಗದ ಒಟ್ಟು ವೆಚ್ಚ 40,000 ಕೋಟಿ ರೂ.ಗಳಾಗಿದ್ದರೂ, ರಾಜ್ಯ ಸರ್ಕಾರವು ಬಿಬಿಎಂಪಿಗೆ 19,000 ಕೋಟಿ ರೂ.ಗಳಿಗೆ ಮಾತ್ರ ನೀಡಿದೆ. ಉಳಿದ ಹಣವನ್ನು ಸಾಲದ ಮೂಲಕ ಪಾಲಿಕೆ ವ್ಯವಸ್ಥೆಗೊಳಿಸಬೇಕಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
390 ಕೋಟಿ ರೂ. ಆಸ್ತಿ ತೆರಿಗೆ ಬಾಕಿಯಿದೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಒಟ್ಟು 20.5 ಲಕ್ಷ ಆಸ್ತಿಗಳಲ್ಲಿ 3.49 ಲಕ್ಷ ಆಸ್ತಿ ಮಾಲೀಕರು ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ, ಈ ಪೈಕಿ 1.73 ಲಕ್ಷ ಜನರು ದೀರ್ಘಕಾಲದ ಸುಸ್ತಿದಾರರಾಗಿದ್ದರೆ, 1.76 ಲಕ್ಷ ಜನರು ಪ್ರಸಕ್ತ ವರ್ಷ (2024-25) ಸುಸ್ತಿದಾರರಾಗಿದ್ದಾರೆ. ಒಟ್ಟಾರೆಯಾಗಿ 390 ಕೋಟಿ ರೂ. ಬಾಕಿ ವಸೂಲಿ ಮಾಡಬೇಕಿದೆ ಎಂದು ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.
SMSಗಳು, IVRS ಕರೆಗಳು, ವೈಯಕ್ತಿಕ ಕರೆಗಳು, ನೋಟಿಸ್ ಗಳನ್ನು ನೀಡಲಾಗಿದೆ. ಒನ್ ಟೈಮ್ ಸೆಟಲ್ಮೆಂಟ್ (OTS) ಯೋಜನೆಯನ್ನು ಕೂಡ ಬಳಸಿಕೊಂಡಿಲ್ಲ. ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸಿಲ್ಲ. ಇವರಿಂದ ವಸೂಲಿ ಮಾಡದೆ ಇರುವುದು ಪ್ರಾಮಾಣಿಕ ತೆರಿಗೆದಾರರಿಗೆ ಮಾಡುವ ಅನ್ಯಾಯವಾಗುತ್ತದೆ. ಇವರಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement