
ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬುಧವಾರ ಮತ್ತೊಬ್ಬ ಆರೋಪಿಯನ್ನು ಬಂಧನಕ್ಕೊಳಪಡಿಸಿದೆ.
ಬಂಧಿತನನ್ನು ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ ಎಂದು ಗುರ್ತಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಮೂರನೇ ಆರೋಪಿ ಬಂಧನವಾಗಿದೆ.
ಈತ ಭಾರತದಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡುವ ಮತ್ತು ಹವಾಲಾ ವಹಿವಾಟುಗಳಿಗೆ ಅನುಕೂಲ ಮಾಡಿಕೊಡುವ ಕೆಲಸದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ವಿದೇಶದಿಂದ ಕಳ್ಳ ಸಾಗಣೆ ಮೂಲಕ ಚಿನ್ನ ಮಾರಾಟದಲ್ಲಿ ರನ್ಯಾರವರಿಗೆ ಈತ ನೆರವು ನೀಡಿದ್ದ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಡಿಜಿಟಲ್ ದಾಖಲೆಗಳು ಕೂಡ ಪೊಲೀಸರಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ರನ್ಯಾ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡಲು ಹಲವು ಬಾರಿ ಈತ ಸಹಾಯ ಮಾಡಿದ್ದ ಎಂದು ಹೇಳಲಾಗುತ್ತಿದೆ.
ದುಬೈನಿಂದ ಕಳ್ಳಸಾಗಣೆ ಮೂಲಕ ನಗರಕ್ಕೆ ಚಿನ್ನ ತಂಡ ವೇಳೆ ರನ್ಯಾ ದುಬೈ ಫೋನ್ ಸಂಖ್ಯೆಯ ಮೂಲಕ ಸಾಹಿಲ್ ನನ್ನು ಸಂಪರ್ಕಿಸಿದ್ದಾಳೆ. ಈ ಸಂಭಾಷಣೆ ಅಧಿಕಾರಿಗಳಿಗೆ ಸಿಕ್ಕಿದ್ದು, ಹೀಗಾಗಿ ಕಸ್ಟಮ್ಸ್ ಕಾಯ್ದೆ, 1962 ರ ಸೆಕ್ಷನ್ 108 ರ ಅಡಿಯಲ್ಲಿ ಈತನನ್ನು ಬಂಧನಕ್ಕೊಳಪಡಿಲಿದ್ದಾರೆ. ಇದೀಗ ಈತನನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಅಧಿಕಾರಿಗಳು ಕಸ್ಟಡೆ ಪಡೆದುಕೊಂಡಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬಂದಿದ್ದ ರನ್ಯಾ ತನ್ನ ಸೊಂಟ ಹಾಗೂ ದೇಹದ ಇತರೆ ಭಾಗಗಳಲ್ಲಿ ಕ್ರೇಪ್ ಬ್ಯಾಂಡೇಜ್ ಮತ್ತು ಟಿಶ್ಯೂ ಬಳಸಿ ಚಿನ್ನದ ಬಾರ್ ಗಳನ್ನು ಸುತ್ತಿಕೊಂಡಿದ್ದಳು ಹಾಗೂ ಶೂ ಹಾಗೂ ಮುಂಭಾಗದ ಜೇಲಿನಲ್ಲೂ ಚಿನ್ನದ ಬಾರ್ ಗಳನ್ನು ಬಚ್ಚಿಟ್ಟಿದ್ದಳು ಎಂದು ಮೂಲಗಳಿಂದ ತಿಳಿದುಬಂದಿದೆ
Advertisement