
ಬೆಂಗಳೂರು: ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಪಾನ್ ಉಗುಳಿದ ಪ್ರಯಾಣಿಕನೊಬ್ಬನಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸಿದೆ.
ಮೇ 2 ರಂದು ಸಂಜೆ 6.30 ಕ್ಕೆ ದೊಡ್ಡಕಲ್ಲಸಂದ್ರ ಗ್ರೀನ್ ಲೈನ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 1 ರ ಲಿಫ್ಟ್ ಬಳಿ ಪ್ರಯಾಣಿಕ ಪಾನ್ ಮಸಾಲ ಜಗಿದು ಉಗುಳುತ್ತಿದ್ದ. ಈ ವೇಳೆ ಪ್ರಯಾಣಿಕನಿಗೆ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಮೆಟ್ರೊ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೆ, ಇತರ ಪುಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ.
ಸ್ವಚ್ಛತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಯಾಣಿಕರು ಸಹಕರಿಸಿ, ಇಂತಹ ಘಟನೆಗಳು ಸಂಭವಿಸಿದರೆ ತಕ್ಷಣವೇ ಮೆಟ್ರೊ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಿಎಂಆರ್‌ಸಿಎಲ್ ಭಾನುವಾರ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಇತ್ತೀಚೆಗೆ ನಮ್ಮ ಮೆಟ್ರೊ ರೈಲಿನಲ್ಲಿ ಪ್ರಯಾಣಿಕರೊಬ್ಬರು ಪಾನ್‌ಮಸಾಲ ಸೇವಿಸಿದ ವೀಡಿಯೊ ಹರಿದಾಡಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಬಿಎಂಆರ್‌ಸಿಎಲ್, ಮೆಟ್ರೊ ನಿಲ್ದಾಣ ಹಾಗೂ ರೈಲುಗಳ ಒಳಗೆ ತಂಬಾಕು ಆಧರಿತ ಉತ್ಪನ್ನಗಳನ್ನು ಸೇವಿಸುವ ಪ್ರಯಾಣಿಕರಿಗೆ ದಂಡ ವಿಧಿಸಲು ನಿರ್ಧರಿಸಿತ್ತು.
ಏಪ್ರಿಲ್ 26ರಂದು ಮೆಟ್ರೊ ಹಸಿರು ಮಾರ್ಗದಲ್ಲಿ ಮಾದಾವರ ನಿಲ್ದಾಣದಿಂದ ಮಾಗಡಿ ರಸ್ತೆ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆ ಸಂಚಾರದ ವೇಳೆಯೇ ಊಟ ಮಾಡಿದ್ದರು. ಸಹಪ್ರಯಾಣಿಕರೊಬ್ಬರು ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದೇ ಮಹಿಳೆ ಏಪ್ರಿಲ್ 28ರಂದು ಬೆಳಿಗ್ಗೆ ಮಾದಾವರ ಮೆಟ್ರೊ ನಿಲ್ದಾಣಕ್ಕೆ ಬಂದಾಗ ಭದ್ರತಾ ಸಿಬ್ಬಂದಿ ದಂಡ ವಿಧಿಸಿದ್ದರು.
Advertisement