
ಬೆಂಗಳೂರು: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನ ಪರವಾಗಿ ನಿಂತ ಟರ್ಕಿಗೆ ಭಾರತ ಸೂಕ್ತ ರೀತಿಯಲ್ಲಿ ತಿರುಗೇಟು ನೀಡುತ್ತಿದ್ದು, ಟರ್ಕಿ ಮೇಲೆ ಹಲವು ನಿರ್ಬಂಧಗಳನ್ನು ಹೇರುತ್ತಿದೆ. ಈ ಪಟ್ಟಿಗೆ ಇದೀಗ ಬೆಂಗಳೂರು ಕೂಡ ಸೇರಿಕೊಂಡಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್ ಏರ್ಪೋರ್ಟ್ ಸೇವೆಗಳನ್ನು ಗುರುವಾರ ತಡರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 15 ಅಂತಾರಾಷ್ಟ್ರೀಯ ವಿಮಾನಗಳು ಮತ್ತು ಕಾರ್ಗೋ ವಿಮಾನಗಳನ್ನು ಸೆಲೆಬಿ ಏವಿಯೇಷನ್ ನಿರ್ವಹಣೆ ಮಾಡುತ್ತಿತ್ತು. ಅವುಗಳನ್ನು ಗುರುವಾರ ರಾತ್ರಿಯಿಂದಲೇ ಬೇರೆ ಏರ್ ಸರ್ವೀಸಸ್ ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದ 9 ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡುತ್ತಿದ್ದ ಟರ್ಕಿಯ ಸೆಲೆಬಿ ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸನ್ಸ್ ಗಳನ್ನು ಭಾರತೀಯ ನಾಗರಿಕ ವಿಮಾನಯಾನ ಸುರಕ್ಷಾ ಬ್ಯೂರೋ (ಬಿಸಿಸಿಎಸ್) ರದ್ದು ಮಾಡಿದೆ. ರಾಷ್ಟ್ರೀಯ ಭದ್ರತಾ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶಿಸಲಾಗಿತ್ತು.
ಇಸ್ತಾನ್‌ಬುಲ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಲೆಬಿ ಏವಿಯೇಷನ್ ಹೋಲ್ಡಿಂಗ್‌ನ ಅಂಗಸಂಸ್ಥೆಯಾಗಿರುವ ಸೆಲೆಬಿ ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಕೊಚ್ಚಿನ್, ಕಣ್ಣೂರು, ಚೆನ್ನೈ, ಗೋವಾದಲ್ಲಿ ಈ ಕಂಪನಿ ಪ್ರಾಥಮಿಕ ಸೇವೆ ನೀಡುತ್ತಿತ್ತು. ಸದ್ಯವೇ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಸೇವೆಗಳನ್ನು ನೀಡುವ ಗುತ್ತಿಗೆಯ ಆ ಕಂಪನಿ ಪಡೆಯಲು ಸಿದ್ಧತೆ ನಡೆಸಿತ್ತು. ಅಷ್ಟರಲ್ಲೇ ಭಾರತ ಸರ್ಕಾರ ಸೆಲೆಬಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್ ರದ್ದುಗೊಳಿಸಿದೆ.
Advertisement