
ಬೆಂಗಳೂರು: ನಗರದ ಶಿವಾನಂದ ವೃತ್ತದ ಕುಮಾರ ಕೃಪಾ ರಸ್ತೆಯಲ್ಲಿ ಏಕಾಏಕಿ ಬೃಹತ್ ಗಾತ್ರದ ಮರವೊಂದು ಬುಡಮೇಲಾಗಿ ಬಿದ್ದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಶುಕ್ರವಾರ ನಡೆದಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಮರ ಬಿದ್ದಿದ್ದು, ಈ ವೇಳೆ ಶಿವಾಜಿನಗರ ನಿವಾಸಿ ಹಾಗೂ ಐಸಿಐಸಿಐ ಬ್ಯಾಂಕ್‌ನ ಉದ್ಯೋಗಿ ಅಸ್ಲಮ್ (33) ಅವರ ಬಲ ಕಾಲಿನ ಮೂಳೆ ಮುರಿದಿದೆ. ಇದೇ ವೇಳೆ ದೇವನಹಳ್ಳಿ ಮೂಲದ ಚಿತ್ರಕಲಾ ಪರಿಷತ್ 'ಡಿ' ಗ್ರೂಪ್ ಸಿಬ್ಬಂದಿ ರಂಗಸ್ವಾಮಿ ಅವರ ಬಲಗೈಗೆ ಗಾಯಗಳಾಗಿವೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮರ ಬಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಿಬಿಎಂಪಿಯಿಂದ ವೈದ್ಯಕೀಯ ವೆಚ್ಚದ ಸಹಕಾರ ನೀಡಲಾಗುವುದು ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಮರಗಳು ಮಳೆಗಾಲದಲ್ಲಿ ಹೆಚ್ಚಾಗಿ ಬೀಳುತ್ತಿವೆ. ನಗರದಲ್ಲಿ 30 ರಿಂದ 40 ವರ್ಷದ ಹಿಂದೆ ನೆಟ್ಟು ಬೆಳೆಸಿದ ಮರಗಳು ಹೆಚ್ಚಾಗಿವೆ. ಹೊರ ಭಾಗದಿಂದ ಈ ಮರಗಳು ಹಸಿರಾಗಿ ಇರುವುದು ಕಂಡು ಬಂದರೂ ಮರದ ಬೇರುಗಳು ರಸ್ತೆ ಹಾಗೂ ಚರಂಡಿ ಕಾಮಗಾರಿ ವೇಳೆಯಲ್ಲಿ ಹಾನಿ ಉಂಟಾಗಿದ್ದರೆ ಮುಂದಿನ 4 ರಿಂದ 6 ತಿಂಗಳಿನಲ್ಲಿ ಮರಗಳು ಬೀಳುವ ಸಾಧ್ಯತೆ ಹೆಚ್ಚಾಗಿರಲಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅರಣ್ಯ ವಿಭಾಗದಿಂದ ಒಣಗಿದ ಹಾಗೂ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವು ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Advertisement