
ಬೆಂಗಳೂರು: ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡ ವಿರೋಧಿ ವಿಡಿಯೋ ವ್ಯಾಪಕ ವೈರಲ್ ಆಗಿರುವಂತೆಯೇ ಈ ಕುರಿತು ಕಿಡಿಕಾರಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸೋನು ನಿಗಮ್ ಸಿಂಗ್ (Sonu Nigam Singh) ಕಿಡಿಕಾರಿದ್ದಾರೆ.
ಹೌದು.. ಬೆಂಗಳೂರಿನ SBI ಬ್ಯಾಂಕ್‌ನಲ್ಲಿ ಮ್ಯಾನೇಜರ್ ಕನ್ನಡ ಮಾತನಾಡಲು ನಿರಾಕರಿಸಿದ ಘಟನೆ ವಿವಾದ ಸೃಷ್ಟಿಸಿದ್ದು, ಈ ಕುರಿತು ಕನ್ನಡ ಪರ ಹೋರಾಟಗಾರರ ಪ್ರತಿಭಟನೆಗೆ ಮಣಿದ ಮ್ಯಾನೇಜರ್ ಕ್ಷಮೆ ಕೋರಿದ್ದರೂ ಈ ಕುರಿತ ವಿವಾದ ಮಾತ್ರ ಯಾಕೋ ಇನ್ನೂ ತಣ್ಣಗಾಗುವಂತೆ ಕಾಣುತ್ತಿಲ್ಲ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ವಿಷಯದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಸೋನು ನಿಗಮ್ ಸಿಂಗ್ ಮಾಡಿದ ಟ್ವೀಟ್ ಒಂದು ವೈರಲ್ ಆಗಿದೆ.
ಇತ್ತೀಚೆಗೆ ಕನ್ನಡಿಗರನ್ನು ಕೆಣಕಿ ಬಳಿಕ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಕ್ಷಮೆ ಕೋರಿದ್ದ ಗಾಯಕ ಸೋನು ನಿಗಮ್ ಇದೀಗ ಮತ್ತೆ ಕನ್ನಡ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದ್ದಾರೆ.
ತೇಜಸ್ವಿ ಸೂರ್ಯ ಹೇಳಿದ್ದೇನು?
ಎಸ್ಬಿಐ ಬ್ಯಾಂಕ್ನ ಬ್ರ್ಯಾಂಚ್ ಮ್ಯಾನೇಜರ್ ಅರವರ ಈ ರೀತಿಯ ದುಂಡಾವರ್ತನೆ ಸಹಿಸಲು ಆಗದು. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಅದರಲ್ಲಿಯೂ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರು ಮಾತನಾಡುವ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸತಕ್ಕದ್ದು. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಕನ್ನಡಿಗರನ್ನು ಪರಿಗಣಿಸುವಂತೆ ನಾನು ಸಂಸತ್ತಿನ ಒಳಗೆ ಮತ್ತು ಹೊರಗೆ ಹಲವು ಬಾರಿ ಪ್ರಸ್ತಾಪಿಸಿದ್ದೇನೆ.
ಇತ್ತೀಚೆಗಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆಯೂ ನಾನು ಇದನ್ನೇ ಪುನರುಚ್ಚರಿಸಿ, ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದು, ಈ ಕುರಿತಂತೆ DFS ನೀತಿಯಡಿಯಲ್ಲಿಯೇ ನೇಮಕಾತಿ ಕೈಗೊಳ್ಳುವಂತೆ ಎಸ್ಬಿಐ ಬಳಿ ವಿನಂತಿಸುತ್ತೇನೆ. ಈ ರೀತಿಯ ವರ್ತನೆ ತೋರಿರುವ ಬ್ಯಾಂಕ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರ ಬಳಿ ನಾನು ಒತ್ತಾಯಿಸಿದ್ದು, ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಬ್ಯಾಂಕಿಂಗ್ ವಲಯ ಸಿಬ್ಬಂದಿಗಳು ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಅಗತ್ಯತೆ ಇದೆ’ ಎಂದಿದ್ದರು.
ಕನ್ನಡದ ಹೀರೋಗಳಿಗೆ ಹೇಳೋ ಗಟ್ಸ್ ಇದೆಯಾ: ಸೋನು ನಿಗಮ್ ಕಿಡಿ
ಇನ್ನು ಸಂಸದ ತೇಜಸ್ವಿ ಸೂರ್ಯರ ಈ ಟ್ವೀಟ್ ಗೆ ಸೋನು ನಿಗಮ್ ಸಿಂಗ್ ಕಿಡಿಕಾರಿದ್ದು, ‘ಕನ್ನಡ ಸಿನಿಮಾ ಹಿಂದಿಗೆ ಡಬ್ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ. ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೋಬ್ಬ ಭಾಷಾ ಹೋರಾಟಗಾರ ಅಷ್ಟೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.
ಸೋನು ನಿಗಮ್ ಗಾಯಕ ಅಲ್ಲ.. ಇಷ್ಟಕ್ಕೂ ಯಾರು ಈತ?
ಈ ಪ್ರಕರಣದಲ್ಲಿ ಅನಾವಶ್ಯಕವಾಗಿ ಬಾಲಿವುಡ್ ಗಾಯಕ ಸೋನು ನಿಗಮ್ ಹೆಸರು ತಳುಕು ಹಾಕಿಕೊಂಡಿದೆ. ಏಕೆಂದರೆ ಪ್ರಸ್ತುತ ತೇಜಸ್ವಿ ಸೂರ್ಯ ಕುರಿತು ಟ್ವೀಟ್ ಮಾಡಿರುವ ಸೋನು ನಿಗಮ್ ಬಾಲಿವುಡ್ ಗಾಯಕ ಸೋನು ನಿಗಮ್ ಅಲ್ಲ... ಈತನ ಹೆಸರು ಸೋನು ನಿಗಮ್ ಸಿಂಗ್ (@SonuNigamSingh). ಈ ಸೋನು ನಿಗಮ್ ಸಿಂಗ್ ಎಕ್ಸ್ ಖಾತೆಯಲ್ಲಿನ ಮಾಹಿತಿಯಂತೆ ಈತ ಬಿಹಾರ ನಿವಾಸಿಯಾಗಿದ್ದು, ವೃತ್ತಿಯಲ್ಲಿ ವಕೀಲ ಎಂದು ಹೇಳಿಕೊಂಡಿದ್ದಾನೆ.
ಟ್ವೀಟ್ ಮಾಡಿದ್ದು ಗಾಯಕ ಸೋನು ನಿಗಮ್ ಅಲ್ಲ..
ಅಂತೆಯೇ ಈ ಟ್ವೀಟ್ ಮಾಡಿದ್ದು ಗಾಯಕ ಸೋನು ನಿಗಮ್ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ಗಾಯಕ ಸೋನು ನಿಗಮ್ ಅವರು ಟ್ವಿಟರ್ ಬಳಕೆ ಮಾಡೋದು ನಿಲ್ಲಿಸಿ ಏಳು ವರ್ಷಗಳು ಕಳೆದಿವೆ. ಆದರೆ, ಅವರ ಹೆಸರಲ್ಲಿ ಬೇರೊಬ್ಬರು ಖಾತೆ ತೆರೆದಿದ್ದಾರೆ. ಈ ಬಗ್ಗೆ ಸೋನು ನಿಗಮ್ ಪ್ರಶ್ನೆ ಮಾಡಿದ್ದರು. ಆದರೆ, ಆ ವ್ಯಕ್ತಿ ನನ್ನ ಹೆಸರು ಸೋನು ನಿಗಮ್ ಎಂದು ದಾಖಲೆ ನೀಡಿದ್ದರು. ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸೋನು ನಿಗಮ್ಗೆ ಬೈಯ್ಯುತ್ತಿದ್ದಾರೆ.
ಏನಿದು ಬ್ಯಾಂಕ್ ಘಟನೆ?
ಬೆಂಗಳೂರಿನ ಚಂದಾಪುರದ ಎಸ್ಬಿಐ ಬ್ಯಾಂಕ್ಗೆ ಕೆಲಸದ ನಿಮಿತ್ತ ಗ್ರಾಹಕರೊಬ್ಬರು ಹೋದಾಗ ಅಲ್ಲಿನ ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ ಉದ್ಧಟತನ ತೋರಿದ್ದರು. ಗ್ರಾಹಕನಿಗೆ ಹಿಂದಿ ಮಾತನಾಡುವಂತೆ ಹೇಳಿದ್ದೂ ಅಲ್ಲದೆ, ಯಾವತ್ತೂ ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ್ದರು.
Advertisement