ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಕನ್ನಡಿಗರ ಆಕ್ರೋಶ ಗುರಿಯಾಗಿದ್ದಾರೆ. ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದು ನಟ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿವೆ. ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊರಗಡೆ ಇಂದು ಪ್ರತಿಭಟನೆ ನಡೆಸಿದ್ದು ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. 'ಥಗ್ ಲೈಫ್ 'ಬ್ಯಾನ್ ಕುರಿತು ಚರ್ಚಿಸಲು ಕನ್ನಡ ಚಿತ್ರರಂಗದ ಎಲ್ಲಾ ಪಾಲುದಾರರರೊಂದಿಗೆ ನಾಳೆ ಸಭೆ ನಡೆಸಿ, ಮಧ್ಯಾಹ್ನದೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು KFCC ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ಥಗ್ ಲೈಫ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ ಶಿವರಾಜ್ ಕುಮಾರ್ ಸಹ ಭಾಗಿವಹಿಸಿದ್ದರು. ಈ ವೇಳೆ ಮಾತನಾಡಿದ್ದ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ. ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ನಟ ಕಮಲ್ ಹಾಸನ್ ಹೇಳಿಕೆಗೆ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ, ಕನ್ನಡ ಭಾಷೆಗೆ ಬಹಳ ದೀರ್ಘ ಇತಿಹಾಸವಿದೆ. ಆದರೆ ಕಮಲ್ ಹಾಸನ್ ಗೆ ಕನ್ನಡದ ಇತಿಹಾಸ ಹೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಮಂಗಳೂರಿನ ಬಂಟ್ವಾಳದ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಮಂಗಳವಾರ ಪಿಕಪ್ ವಾಹನ ಚಾಲಕ ಅಬ್ದುಲ್ ರಹೀಮ್ ಎಂಬಾತನಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ದೀಪಕ್, ಸುಮಿತ್ ಮತ್ತು ಇತರ 13 ಜನರ ಹೆಸರುಗಳನ್ನು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಮೊಹಮ್ಮದ್ ನಿಸಾರ್ ಎಂಬುವವರು ದೂರು ನೀಡಿದ್ದಾರೆ. ಅಬ್ದುಲ್ ರಹೀಮ್ ಶವ ಯಾತ್ರೆ ವೇಳೆ ಆಕ್ರೋಶ ಭುಗಿಲೆದ್ದಿದ್ದು ಸೂರತ್ಕಲ್ ನಲ್ಲಿ ದುಷ್ಕರ್ಮಿಗಳು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದಾಗಿ ಕೆಲಕಾಲ ಆಂತಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು. ಅಬ್ದುಲ್ ರಹೀಮ್ ಕೊಲೆ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್‌ವೆಲ್ ರನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ ಠಾಣೆ ಮುಂದೆ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದಾದ್ಯಂತ ಭಾರಿ ಮಳೆ ಆಗುತ್ತಿರುವ ಕಾರಣ ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ತೆರಳಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ಇಂದು ಬೆಳಿಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ರಾಜ್ಯದಲ್ಲಿ ಮಳೆಯಿಂದಾಗಿ ಒಟ್ಟು 45 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು 1,385 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಸಿಎಂಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಗ್ಗೆ ಸಮಗ್ರ ಅವಲೋಕನ ನಡೆಸಲು ಇದೇ 30 ಮತ್ತು 31ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ಕರೆಯುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಡೆವಿಲ್ ಸಿನಿಮಾ ಶೂಟಿಂಗಾಗಿ ಜೂನ್ 1 ರಿಂದ 25 ರವರೆಗೆ ದುಬೈ ಮತ್ತು ಯೂರೋಪ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಎರಡನೇ ಆರೋಪಿ ಆಗಿರುವ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಜಾಮೀನು ನೀಡುವಾಗ ವಿದೇಶಕ್ಕೆ ತೆರಳುವಂತಿಲ್ಲ ಎಂಬ ಷರತ್ತನ್ನು ಕೋರ್ಟ್ ವಿಧಿಸಿತ್ತು. ವಿದೇಶಕ್ಕೆ ತೆರಳಿದರೆ ಭಾರತಕ್ಕೆ ಮತ್ತೆ ವಾಪಸ್ ಬರುವುದು ಅನುಮಾನ. ಹತ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ವಿದೇಶಕ್ಕೆ ತೆರಳಲು ಅನಮತಿ ನೀಡದಂತೆ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಆಕ್ಷೇಪಣೆ ಸಲ್ಲಿಸಿದ್ದಾರೆ.
Advertisement