
ಬೆಂಗಳೂರು: ತನ್ನ ಮೂವರು ಹೆಂಡತಿಯರು ಮತ್ತು ಒಂಬತ್ತು ಮಕ್ಕಳನ್ನು ನೋಡಿಕೊಳ್ಳಲು ಕಳ್ಳತನಕ್ಕೆ ಇಳಿದ 36 ವರ್ಷದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಆರೋಪಿಯನ್ನು ಬಾಬಾಜಾನ್ ಎಂದು ಗುರುತಿಸಲಾಗಿದ್ದು, 188 ಗ್ರಾಂ ಚಿನ್ನಾಭರಣಗಳು, 550 ಗ್ರಾಂ ಬೆಳ್ಳಿ ಆಭರಣಗಳು ಮತ್ತು 1,500 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
'ಈ ಸಂಬಂಧ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನದೊಂದಿಗೆ ನಾವು ಎಂಟು ಕಳ್ಳತನ ಪ್ರಕರಣಗಳನ್ನು ಪರಿಹರಿಸಿದ್ದೇವೆ' ಎಂದು ಅಧಿಕಾರಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕುಟುಂಬವನ್ನು ನಿರ್ವಹಿಸುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಆತ ಕಳ್ಳತನಕ್ಕೆ ಮುಂದಾಗಿದ್ದಾನೆ. ಮೇಲ್ನೋಟಕ್ಕೆ ಇದುವೇ ಸತ್ಯ ಎಂದು ತಿಳಿದುಬಂದಿದೆ. ಆರೋಪಿಯ ಪತ್ನಿಯರು ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಶ್ರೀರಂಗಪಟ್ಟಣದ ಹೊರವಲಯದಲ್ಲಿರುವ ಆನೇಕಲ್ ಬಳಿಯ ಶಿಕಾರಿಪಾಳ್ಯದಲ್ಲಿದ್ದಾರೆ ಎಂದು ಅವರು ಹೇಳಿದರು.
ಆತ ಮೂವರು ಹೆಂಡತಿಯರು ಮತ್ತು ಒಂಬತ್ತು ಮಕ್ಕಳೊಂದಿಗೆ ಸಂಪರ್ಕದಲ್ಲಿದ್ದಾನೆ ಮತ್ತು ಅವರೆಲ್ಲರನ್ನೂ ನೋಡಿಕೊಳ್ಳುತ್ತಿದ್ದಾನೆ. ಆತ ವೃತ್ತಿಪರ ಕಳ್ಳನಾಗಿದ್ದಾನೆ ಎಂದು ಅಧಿಕಾರಿ ಹೇಳಿದರು.
Advertisement