

ಬೆಂಗಳೂರು: ರಸ್ತೆಯಲ್ಲಿ ತ್ಯಾಜ್ಯ ಎಸೆದು ದುರ್ವರ್ತನೆ ತೋರಿದ ರಾಜಾಜಿನಗರದ ಪ್ರತಿಷ್ಠಿತ ಐಸ್ ಕ್ರೀಮ್ ಅಂಗಡಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) 25,000 ರೂ. ದಂಡ ವಿಧಿಸಿ, ತಕ್ಕ ಪಾಠ ಕಲಿಸಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಅವರು, ಪರಿಶೀಲನೆಗೆ ತೆರಳಿದ್ದಾಗ ರಾಜಾಜಿನಗರದ ರಸ್ತೆಯಲ್ಲಿ ಶಾಂತಲಾ ಐಸ್ ಕ್ರೀಮ್ ಅಂಗಡಿಯ ಸಿಬ್ಬಂದಿಗಳು ಕಸ ಎಸೆಯುತ್ತಿರುವುದನ್ನು ಕಂಡು, ಅಧಿಕಾರಿಗಳು ಮತ್ತು ಮಾರ್ಷಲ್‌ಗಳಿಗೆ 25,000 ರೂ. ದಂಡ ವಿಧಿಸಲು ಆದೇಶಿಸಿದ್ದಾರೆ.
ಬಳಿಕ ಅಂಗಡಿಯ ಮಾಲೀಕರ ಬಳಿ ತೆರಳಿದ ಮಾರ್ಷಲ್ ಗಳು 5 ನಿಮಿಷಗಳಲ್ಲಿ ದಂಡ ಪಾವತಿಸಿ, ಇಲ್ಲದಿದ್ದರೆ, ದಂಡದ ಮೊತ್ತ ದ್ವಿಗುಣಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಬಳಿಕ ತಪ್ಪನ್ನು ಒಪ್ಪಿಕೊಂಡ ಅಂಗಡಿಯ ಮಾಲೀಕ, ದಂಡದ ಮೊತ್ತವನ್ನು ಕೂಡಲೇ ಪಾವತಿಸಿದ್ದಾರೆ.
ಇದು ಒಂದು ಪಾಠವಾಗಿದೆ. ನಗರದ ತ್ಯಾಜ್ಯ ಸಮಸ್ಯೆಯನ್ನು ನಿಯಂತ್ರಿಸಲು ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆಂದು ಕರೀ ಗೌಡ ಅವರು ಹೇಳಿದ್ದಾರೆ.
ವಸತಿ ಪ್ರದೇಶದಲ್ಲಿ ಕಣ್ಣದುರೇ ಘಟನೆ ನಡೆದಾಗ ಕರೀ ಗೌಡ ಅವರು ಕೋಪಗೊಂಡಿದ್ದಾರೆ ಎಂದು ಹಿರಿಯ ಎಂಜಿನಿಯರ್ ಒಬ್ಬರು ಹೇಳಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ಓಡಾಡುತ್ತಿದ್ದ ಅಧಿಕಾರಿಗೆ, ತಮ್ಮದೇ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ತ್ಯಾಜ್ಯ ಸುರಿಯುವ ಅಂಗಡಿಯ ಸಿಬ್ಬಂದಿಗಳಲ್ಲಿ ಭಯದ ಭಾವನೆ ಮೂಡಿಸಲು, ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ ಮಾಡುವವರನ್ನು ನಿಯಂತ್ರಿಸಲು ಭಾರೀ ದಂಡವನ್ನು ಹೇರಲಾಗುತ್ತಿದೆ. ನಮ್ಮ ಸಂದೇಶವು ತುಂಬಾ ಸ್ಪಷ್ಟವಾಗಿದೆ. ಆಟೋ-ಟಿಪ್ಪರ್‌ಗಳಿಗೆ ತ್ಯಾಜ್ಯವನ್ನು ಹಸ್ತಾಂತರಿಸದೆ, ಬೀದಿಗೆ ಎಸೆಯುವ ಮೂಲಕ ಬೆಂಗಳೂರನ್ನು ಕೊಳಕು ಮಾಡಲು ಪ್ರಯತ್ನಿಸಿದರೆ, ಬಿಎಸ್‌ಡಬ್ಲ್ಯೂಎಂಎಲ್ ಪ್ರತಿದಾಳಿ ನಡೆಸಲಿದ್ದು, ದಂಡವನ್ನು ವಿಧಿಸುತ್ತದೆ ಎಂದು ಹೇಳಿದ್ದಾರೆ.
Advertisement