

ಬೆಂಗಳೂರು: 7.11 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಹಿಸ್ಟರಿ ಶೀಟರ್ ಆಗಿದ್ದು, ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಬನಸವಾಡಿಯ ನಿವಾಸಿ ರವಿ (33) ಈ ಹಿಂದೆ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ. ಈತನ ತಂದೆ ನಿವೃತ್ತ ಸೈನಿಕರಾಗಿದ್ದು, ಸಹೋದರ ರಾಕೇಶ್ ಕೂಡ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.
ಈ ದರೋಡೆ ಪ್ರಕರಣದಲ್ಲಿ ಬಂಧಿತ 9 ಆರೋಪಿಗಳ ಪೈಕಿ ರವಿ ಎಂಬಾತ 2018ರಲ್ಲಿ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ. ಈ ಮೂಲಕ ಕೃತ್ಯವೆಸಗಿದ ಏಳು ವರ್ಷಗಳ ಬಳಿಕ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬಾಣಸವಾಡಿಯ ರೌಡಿಶೀಟರ್ ಆಗಿದ್ದ ಚೆಲ್ಲಾ ಕುಮಾರ್ ಎಂಬುವನನ್ನು 2018ರಲ್ಲಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎದುರಾಳಿ ಗುಂಪು ಹತ್ಯೆಗೈದಿತ್ತು. ಈ ಕೃತ್ಯದಲ್ಲಿ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ರವಿ ಕೂಡ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಪೊಲೀಸರು ಆರೋಪಿಯ ಹಿನ್ನೆಲೆ ಕೆದಕಿದ್ದಾಗ ಆರೋಪಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರವಿ ಇತ್ತೀಚೆಗೆ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದ. ಈತನ ಸಹೋದರ ರಾಕೇಶ್ ಸಹ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.
ವಿಚಾರಣೆ ವೇಳೆ ಆರೋಪಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾನೆ.
ಏತನ್ಮಧ್ಯೆ, ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮತ್ತೊಬ್ಬ ಆರೋಪಿ ದಿನೇಶ್ ಪಿ (30) ಲೈಂಗಿಕ ಕಿರುಕುಳ ಪ್ರಕರಣ ಮತ್ತು ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ.
ದರೋಡೆ ನಡೆದಿದ್ದರೂ ಊಟದ್ದೇ ಚಿಂತೆ
ಸಿಎಂಎಸ್ ವಾಹನ ಅಡ್ಡಗಟ್ಟಿ 7.11 ಕೋಟಿ ರು.ದರೋಡೆ ನಡೆದಿತ್ತು. ಇನ್ನೋವಾ ಕಾರಿನಲ್ಲಿ ಕಸ್ಟೋಡಿಯನ್, ಗನ್‌ಮ್ಯಾನ್ ಕರೆದೊಯ್ದಿ ದ್ದರು. ಮಾರ್ಗಮಧ್ಯೆ ಕಸ್ಟೋಡಿಯನ್, ಗನ್ ಮ್ಯಾನ್ ಇಳಿಸಿ ದರೋಡೆ ಗ್ಯಾಂಗ್ ತೆರಳಿತ್ತು. ದರೋಡೆಕೋರರು ಇಳಿಸಿದ್ದ ಸ್ಥಳದಿಂದ ಠಾಣೆಗೆ ಕೂಗಳತೆ ದೂರದಲ್ಲಿದ್ದರು. ಈ ಬಗ್ಗೆ ಸಿಎಂಎಸ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ದರೋಡೆ ನಡೆದು 2 ಗಂಟೆ ನಂತರ ಪೊಲೀಸರಿಗೆ ವಿಚಾರ ಗೊತ್ತಾಗಿತ್ತು.
ಇಷ್ಟೊತ್ತು ಏನು ಮಾಡುತ್ತಿದ್ರಿ ಎಂದು ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ಮಾಡಿದಾಗ ಊಟದ ಸಮಯ ಆಗಿತ್ತು. ಆದ್ದರಿಂದ ಊಟಕ್ಕೆ ಹೋಗಿದ್ದೆವು ಎಂದಿದ್ದಾರೆ. ಹೀಗಾಗಿ ಸಿಎಂಎಸ್ ವಾಹನ ಸಿಬ್ಬಂದಿ ಮೇಲೆ ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿತು ಎಂದು ಆಯುಕ್ತರು ವಿವರಿಸಿದರು.
ಸದ್ಯ ಪೊಲೀಸರು ಸಿಎಂಎಸ್ ವಾಹನದ ಕಸ್ಟೋಡಿಯನ್, ಗನ್‌ಮ್ಯಾನ್‌ಗಳ ವಿಚಾರಣೆ ಮುಂದುವರಿಸಿದ್ದಾರೆ. ದರೋಡೆ ಪ್ರಕರಣದಲ್ಲಿ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸ್ ಆಯುಕ್ತರು ಹೇಳಿದ್ದರು.
ಆರೋಪಿ ಫೋಟೋ ತಪ್ಪಾಗಿ ಪ್ರಕಟ: ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಇನ್ನು ಆರೋಪಿಯ ಫೋಟೋ ಬದಲಿಗೆ ತನ್ನ ಫೋಟೋವನ್ನು ಸುದ್ದಿ ವಾಹಿನಿಯೊಂದರಲ್ಲಿ ಪ್ರಕಟಿಸಿದ್ದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವುದು ವರದಿಯಾಗಿದೆ.
ಪ್ರಕರಣದಲ್ಲಿ ಬಂಧಿಸಲಾಗಿರುವ 9 ಆರೋಪಿಗಳಲ್ಲಿ ಓರ್ವ ಆರೋಪಿ, ಮಾಜಿ CMS ಉದ್ಯೋಗಿಯಾಗಿದ್ದ ಎಂದು ತಿಳಿದುಬಂದಿದೆ.
ಪ್ರಕರಣದ ಆರೋಪಿಯಾಗಿರುವ 36 ವರ್ಷದ ಕ್ಸೇವಿಯರ್ ಅಲಿಯಾಸ್ ಎಂ ಪ್ರಜನ್ (29) ಬದಲು ಮತ್ತೊಬ್ಬ ವ್ಯಕ್ತಿಯ ಫೋಟೋವನ್ನು ಮಾಧ್ಯಮಗಳು ಪ್ರಕಟಿಸಿದ್ದವು. ಇದನ್ನು ಗಮನಿಸಿದ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದರಿಂದ ನೊಂದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಘಟನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆರೋಪಿ ಕ್ಸೇವಿಯರ್ CMS ನಲ್ಲಿ ನೇಮಕಾತಿಯ ಸಮಯದಲ್ಲಿ ಮತ್ತೊಬ್ಬ ಕ್ಸೇವಿಯರ್‌ನ ಫೋಟೋವನ್ನು ಸಲ್ಲಿಸಿದ್ದಾನೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
Advertisement