
ಬೆಂಗಳೂರು: ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಕಳಪೆ ನಿರ್ವಹಣೆಯಿಂದಾಗಿ 22 ವರ್ಷದ ವಿದ್ಯಾರ್ಥಿನಿ ಧನುಶ್ರೀ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಹೊಸಕೋಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದ್ದು, ಇಬ್ಬರು ಸಹೋದರಿಯರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಮೃತರನ್ನು ಶೈಲಾ (25) ಮತ್ತು ಆಕೆಯ ಸಹೋದರಿ ಶ್ವೇತಾ (22) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 1.45 ರ ಸುಮಾರಿಗೆ ಕೈವಾರ ತಾತಯ್ಯ ದೇವಸ್ಥಾನದಿಂದ ಹೊಸಕೋಟೆಯಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ರಸ್ತೆ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ರಸ್ತೆಯ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದವು. ಯುವತಿಯರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನವು ಜಲ್ಲಿಕಲ್ಲುಗಳ ಮೇಲೆ ಹರಿದು ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಅದೇ ಸಮಯದಲ್ಲಿ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ (ಸರಕು ಸಾಗಣೆ ವಾಹನ) ವೇಗವಾಗಿ ಬಂದು, ಕೆಳಗೆ ಬಿದ್ದಿದ್ದ ಯುವತಿಯರ ದೇಹದ ಮೇಲೆ ಹರಿದಿದೆ. ಈ ವೇಳೆ ಕ್ಯಾಂಟರ್ ಚಕ್ರಕ್ಕೆ ಸಿಲುಕಿದ್ದ ಇಬ್ಬರೂ ಯುವತಿಯರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ.
ಮೃತ ಯುವತಿ ಶೈಲಾ ನರ್ಸ್ ಆಗಿ ಕೆಲಸ ಮಾಡತ್ತಿದ್ದರು. ಈಕೆಯ ಸಹೋದರಿ ಶ್ವೇತಾ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದರು ಎಂದು ತಿಳಿದುಬಂದಿದೆ.
ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಸಂಜೆ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಏತನ್ಮಧ್ಯೆ ಘಟನೆಗೆ ಕಳಪೆ ರಸ್ತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ, ವಾಹನ ಸವಾರರ ಸುರಕ್ಷತೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಯಲ್ಲಿ ಹರಡಿದ್ದ ಜಲ್ಲಿಕಲ್ಲುಗಳೇ ವಾಹನಗಳು ಸ್ಕಿಡ್ ಆಗಲು ಕಾರಣ. ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement