
ಬೆಂಗಳೂರು: ಶಾಲೆಗೆ ಚಕ್ಕರ್ ಹಾಕುತ್ತಿದ್ದ ಐದನೇ ತರಗತಿ ವಿದ್ಯಾರ್ಥಿಯನ್ನು ಕೂಡಿ ಹಾಕಿ, ಪಿವಿಸಿ ಪೈಪ್'ನಿಂದ ಮನಬಂದಂತೆ ಅಮಾನುಷವಾಗಿ ದಂಡಿಸಿದ ಆರೋಪದ ಮೇರೆಗೆ ಖಾಸಗಿ ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕ ಸೇರಿದಂತೆ ಇತರರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಂಕದಕಟ್ಟೆಯ ಹೊಯ್ಸಳ ನಗರದ ನಿವಾಸಿ ದಿವ್ಯಾ (30) ಅವರು ಸುಂಕದಕಟ್ಟೆಯ ಪೈಪ್‌ಲೈನ್ ರಸ್ತೆಯಲ್ಲಿರುವ ನ್ಯೂ ಸೇಂಟ್ ಮೇರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರಾಕೇಶ್ ಕುಮಾರ್, ಶಾಲೆಯ ಮಾಲೀಕ ವಿಜಯ್ ಕುಮಾರ್ ಮತ್ತು ಶಿಕ್ಷಕಿ ಚಂದ್ರಿಕಾ ವಿರುದ್ಧ ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 14 ರಂದು ಸಂಜೆ 4 ರಿಂದ 5 ಗಂಟೆಯ ನಡುವೆ ಪ್ರಾಂಶುಪಾಲರು ಬಾಲಕನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಮರುದಿನ ದೂರು ದಾಖಲಿಸಲಾಗಿದೆ. ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಬಾಲಾಪರಾಧಿಕ ನ್ಯಾಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿತ ಶಿಕ್ಷಕ ಹಾಗೂ ಪ್ರಾಂಶುಪಾಲರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಮಗ ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ಓದುತ್ತಿದ್ದಾನೆ. ಶುಲ್ಕವನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ ರಾಕೇಶ್ ಕುಮಾರ್ ನನ್ನ ಮಗನನ್ನು ಪ್ಲಾಸ್ಟಿಕ್ ಪಿವಿಸಿ ಪೈಪ್‌ನಿಂದ ಅಮಾನುಷವಾಗಿ ಹೊಡೆದಿದ್ದಾರೆ. ಇದರಿಂದ ದೇಹದಲ್ಲಿ ಹಲವು ಗಾಯಗಳಾಗಿದ್ದು, ರಕ್ತ ಹೆಪ್ಪುಗಟ್ಟಿದೆ. ಹೊಡೆತಗಳಿಂದ ಮಗು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತರಗತಿ ಶಿಕ್ಷಕಿ ಚಂದ್ರಿಕಾ ಮಗುವನ್ನು ಹಿಡಿದು ಹಲ್ಲೆಗೆ ಸಹಾಯ ಮಾಡಿದ್ದಾರೆ.
ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಶಾಲೆಯ ಮಾಲೀಕ ವಿಜಯ್ ಕುಮಾರ್ ಏನೂ ತಿಳಿಯದವನಂತೆ ನಟಿಸಿ, ಮಗುವನ್ನು ಹೊಡೆಯಲು ಪ್ರೋತ್ಸಾಹಿಸಿದ್ದಾನೆ. ಘಟನೆ ಬಳಿಕ ನನ್ನ ಮಗನಿಗೆ ದೈಹಿಕ ಹಾಗೂ ಮಾನಸಿಕ ಆಘಾತವಾಗಿದೆ. ಮಗುವನ್ನು ಹೊಡೆದಿರುವುದರ ಕುರಿತು ಪ್ರಶ್ನಿಸಿದಾಗ, ನಾವು ಮಧ್ಯಪ್ರವೇಶಿಸಬೇಡಿ. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶಿಸ್ತುಬದ್ಧಗೊಳಿಸುವುದು ಹೀಗೆಯೇ. ನೀವು ಹೆಚ್ಚು ಮಾಡನಾಡಬೇಡಿ. ಮಾತನಾಡಿದರೆ ನಿಮಗೂ ಇದೇ ರೀತಿ ಮಾಡುತ್ತೇವೆ. ಬೇಕಿದ್ದರೆ ಟಿಸಿ (ವರ್ಗಾವಣೆ ಪತ್ರ) ಕೊಡುತ್ತೇವೆ. ತೆಗೆದುಕೊಂಡು ಹೋಗಿ ಎಂದು ಹೇಳಿದರು ಎಂದು ದಿವ್ಯಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿವ್ಯಾ ಅವರು, ಶಾಲಾ ಆಡಳಿತ ಮಂಡಳಿ ಮಗುವಿನ ಆರೋಗ್ಯ ವಿಚಾರಿಸಲು ಒಮ್ಮೆಯೂ ಕರೆ ಮಾಡಿಲ್ಲ. ಶಾಲೆ ಇದೀಗ ನನ್ನ ಮಗನ ಮೇಲೆ ಕೆಲ ಆರೋಪಗಳನ್ನು ಮಾಡುತ್ತಿದೆ. ಆ ಬಗ್ಗೆ ವೈದ್ಯಕೀಯ ತಪಾಸಣೆಯನ್ನೂ ಮಾಡಿಸಲಿ. ನಮ್ಮ ಅಭ್ಯಂತರವಿಲ್ಲ. ದಾರಿ ತಪ್ಪಿಸಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಘಟನೆ ಶಾಲೆಯ ಆವರಣದೊಳಗೆ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ. ಶಾಲಾ ಸಮಯದ ನಂತರ ತನ್ನ ಮಗನನ್ನು ತರಗತಿಯೊಳಗೆ ಕೂಡಿಹಾಕಿ ಥಳಿಸಲಾಗಿದೆ ಎಂದು ದೂರುದಾರರು ಹೇಳಿದ್ದಾರೆ. ಸಂಜೆ 5 ರಿಂದ 7.30 ರವರೆಗೆ ಪ್ರಾಂಶುಪಾಲರು ಬಾಲಕನನ್ನು ಕತ್ತಲೆಯ ಕೋಣೆಯಲ್ಲಿ ಕೂಡಿಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಬಾಲ ನ್ಯಾಯ ಕಾಯ್ದೆ, 2000 ರ ಸೆಕ್ಷನ್ 75 ರ ಅಡಿಯಲ್ಲಿ ಮಗುವಿನ ಮೇಲೆ ಕ್ರೌರ್ಯ, ಅಪಾಯಕಾರಿ ಆಯುಧಗಳಿಂದ ಗಾಯ (BNS 118(1)) ಮತ್ತು ಕ್ರಿಮಿನಲ್ ಬೆದರಿಕೆ (BNS 351(2)) ಪ್ರಕರಣವನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement