

ಬೆಂಗಳೂರು: ವೇಗವಾಗಿ ಬಂದ ಕಂಟೈನರ್ ಟ್ರಕ್ ರಸ್ತೆ ತಿರುವಿನಲ್ಲಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ಉರಗನದೊಡ್ಡಿ ಬಳಿ ರಸ್ತೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮೃತರನ್ನು ಆಂಧ್ರಪ್ರದೇಶ ಮೂಲದ ಟ್ರಕ್ ಚಾಲಕ ಶ್ರೀನಿವಾಸ್ (26) ಮತ್ತು ಜಾರ್ಖಂಡ್‌ನಿಂದ ಬಂದಿದ್ದ ಕೇಬಲ್ ಡ್ರಿಲ್ಲಿಂಗ್ ಮೆಷಿನ್ ಆಪರೇಟರ್ ಶ್ರೀಮನ್ (25) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗ್ಗೆ 11.45ರ ಸುಮಾರಿಗೆ ಕೇಬಲ್ ಡ್ರಿಲ್ಲಿಂಗ್ ಯಂತ್ರಗಳಿದ್ದ ಕಂಟೈನರ್ ಟ್ರಕ್, ಐವರು ಕಾರ್ಮಿಕರೊಂದಿಗೆ ಬೊಮ್ಮಸಂದ್ರದಿಂದ ಹಾರೋಹಳ್ಳಿಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉರಗನದೊಡ್ಡಿ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಆರು ಮಂದಿ ಗಾಯಗೊಂಡಿದ್ದು, ಶ್ರೀನಿವಾಸ್ ಮತ್ತು ಶ್ರೀಮನ್ ಕಂಟೈನರ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಭೀರ ಗಾಯಗಳಾಗಿರುವ ಇತರ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಾಗಿದೆ.
Advertisement