
ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರಿನ ಬಾಗಲಗುಂಟೆಯ ಸಿಡೇದಹಳ್ಳಿಯಲ್ಲಿ ಘಟನೆ ನಡೆದಿದ್ದು ಮೃತಳನ್ನು 28 ವರ್ಷದ ಪೂಜಾಶ್ರೀ ಎಂದು ಗುರುತಿಸಲಾಗಿದೆ. ದಂಪತಿಯ ಜಗಳಕ್ಕೆ ಹೆಣ್ಣು ಮಗು ತಾಯಿಯನ್ನು ಕಳೆದುಕೊಂಡಿದೆ.
ಮೂರು ವರ್ಷಗಳ ಹಿಂದೆ ಪೂಜಾಶ್ರೀ ನಂದೀಶ್ ಎಂಬಾತನ ಜೊತೆಗೆ ವಿವಾಹವಾಗಿದ್ದರು. ನಂದೀಶ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು ಪೂಜಾಶ್ರೀ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಂದೀಶ್ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಪೂಜಾಶ್ರೀಗೆ ಗೊತ್ತಾಗಿದ್ದು ಈ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳ ಸಹ ನಡೆದಿತ್ತು.
ಈ ವಿಚಾರವಾಗಿ ಎರಡು ಕುಟುಂಬಗಳ ಮಧ್ಯಸ್ಥಿಕೆಯಲ್ಲಿ ರಾಜಿ ನಡೆದಿತ್ತು. ಈ ವೇಳೆ ನಂದೀಶ್ ಇನ್ಮುಂದೆ ತಾನು ಮಹಿಳೆಯೊಂದಿಗೆ ಸಂಬಂಧ ಮುಂದುವರೆಸಲ್ಲ ಎಂದು ಮಾತುಕೊಟ್ಟಿದ್ದನು. ಆದರೆ ಮೂರು ದಿನಗಳ ಹಿಂದೆ ನಂದೀಶ್ ಮತ್ತೆ ಜಗಳ ತೆಗೆದು ಪೂಜಾಶ್ರೀ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಪೂಜಾಶ್ರೀ ಮತ್ತೆ ತಾಯಿ ಮನೆಗೆ ಹೋಗಿದ್ದಳು. ಮತ್ತೆ ಪತಿಯ ಮಾತುಗಳನ್ನು ಕೇಳಿ ಮನೆಗೆ ಬಂದಿದ್ದ ಪೂಜಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೂಜಾಶ್ರೀ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಬಾಗಲಗುಂಟೆ ಪೊಲೀಸರು ನಂದೀಶ್ ನನ್ನು ಬಂಧಿಸಿದ್ದಾರೆ.
Advertisement