
ಬೆಂಗಳೂರು: ತನ್ನ ಮಾಜಿ ಪ್ರೇಯಸಿಗೆ ಕ್ಯಾಬ್ ಚಾಲಕನೊಬ್ಬ ಹಾಡು ಹಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆಯೊಂದು ಬನ್ನೇರುಘಟ್ಟ ಬಳಿಯ ಹೊಮ್ಮದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ಶನಿವಾರ ನಡೆದಿದೆ.
ಆರೋಪಿಯನ್ನು ಬನ್ನೇರುಘಟ್ಟದ ಮಲೆನಲ್ಲಸಂದ್ರ ನಿವಾಸಿ ವಿಟ್ಠಲ್ (50) ಎಂದು ಗುರ್ತಿಸಲಾಗಿದ್ದು, ಸಂತ್ರಸ್ತ ಮಹಿಳೆಯನ್ನು ಬನ್ನೇರುಘಟ್ಟದ ಬಿಲ್ವರದಹಳ್ಳಿ ನಿವಾಸಿ ವನಜಾಕ್ಷಿ (25) ಎಂದು ಗುರ್ತಿಸಲಾಗಿದೆ. ವನಜಾಕ್ಷಿ ಅವರಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವನಜಾಕ್ಷಿ ಅವರು, ಪ್ರಸ್ತುತ ಲಿವ್-ಇನ್ ಸಂಗಾತಿ ಮುನಿಯಪ್ಪ (49) ಮತ್ತು ವೃದ್ಧ ಸಂಬಂಧಿ ಜೊತೆಗೆ ಕುಟುಂಬದ ಸದಸ್ಯರೊಬ್ಬರನ್ನು ಭೇಟಿ ಮಾಡಲು ಕಾರಿನಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಹೋಗುತ್ತಿದ್ದರು.
ಈ ವೇಳೆ ಆರೋಪಿ ವಿಟ್ಠಲ್ ಹಾರ್ನ್ ಮಾಡುತ್ತಲೇ ಕಾರನ್ನು ಹಿಂಬಾಲಿಸಿದ್ದಾರೆ. ಬಳಿಕ ಮುನಿಯಪ್ಪ ಅವರು ಕಾರು ನಿಲ್ಲಿಸಿದಾಗ ಪೆಟ್ರೋಲ್ ತುಂಬಿದ ಕ್ಯಾನ್ ಹಿಡಿದು ಸ್ಥಳಕ್ಕೆ ಬಂದ ಆರೋಪಿ, ಕಾರಿನ ಮೇಲೆ ಪೆಟ್ರೋಲ್ ಸುರಿಯಲು ಆರಂಭಿಸಿದ್ದಾನೆ. ಅಪಾಯವನ್ನು ಅರಿತ ಮುನಿಯಪ್ಪ ಹಾಗೂ ವನಜಾಕ್ಷಿ ಕಾರಿನಿಂದ ಇಳಿದು ಓಡಲು ಪ್ರಾರಂಭಿಸಿದ್ದಾರೆ. ಈ ವೇಳೆ ವಿಟ್ಠಲ್ ವನಜಾಕ್ಷಿ ಅವರ ಬೆನ್ನಟ್ಟಿದ್ದು, ಆಕೆ ಕೆಳಗೆ ಬಿದ್ದಾಗ ಪೆಟ್ರೋಲ್ ಸುರಿದು, ಲೈಟರ್ ನಿಂದ ಬೆಂಕಿ ಹಚ್ಚಿದ್ದಾನೆ.
ಬಳಿಕಕ ಸ್ಥಳದಲ್ಲಿದ್ದ ಇಬ್ಬರು ಆಕೆಯನ್ನು ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಓರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಹೆಚ್ಚೆಚ್ಚು ಜನರು ಸೇರಲು ಶುರುವಾಗುತ್ತಿದ್ದಂತೆಯೇ ಆರೋಪಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಬಳಿಕ ಸ್ಥಳದಲ್ಲಿದ್ದ ಜನರು ಚಾಪೆ ಹಾಗೂ ಬೆಡ್ ಶೀಟ್ ಗಳನ್ನು ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವನಜಾಕ್ಷಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ ಮುನಿಯಪ್ಪ ಅವರ ದೂರಿನ ಆಧಾರದ ಮೇಲೆ, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಶನಿವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವನಜಾಕ್ಷಿ ಮೂರು ವರ್ಷಗಳ ಹಿಂದೆ ತನ್ನ ಪತಿಯಿಂದ ಬೇರ್ಪಟ್ಟಿದ್ದು, ಆತ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಪತಿಯಿಂದ ದೂರಾದ ಬಳಿಕ ವನಜಾ ಅವರು ಒಂದು ವರ್ಷಗಳ ಕಾಲ ವಿಟ್ಠಲ್ ಜೊತೆ ಲಿವ್-ಇನ್-ರಿಲೇಷನ್ ಶಿಪ್ ನಲ್ಲಿದ್ದರು. ಬಳಿಕ ಈತನನ್ನು ತೊರೆದು ಮುನಿಯಪ್ಪ ಜೊತೆ ವಾಸಿಸಲು ಪ್ರಾರಂಭಿಸಿದ್ದರು. ಇದರಿಂದ ಆರೋಪಿ ಕೆರಳಿ, ಹತ್ಯೆಗೆ ಯತ್ನಿಸಿದ್ದಾನೆಂದು ತಿಳಿಸಿದ್ದಾರೆ.
Advertisement