
ಬೆಂಗಳೂರು: ಸೈಕಲ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ 12 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಕಾಮಾಕ್ಷಿಪಾಳ್ಯದ ನಿವಾಸಿ ಶಶಾಂಕ್ (12) ಮೃತ ದುರ್ದೈವಿ. ಸಣ್ಣಾಕಿಬೈಲಿನ ಗಣಪತಿ ದೇವಾಲಯ ರಸ್ತೆಯಲ್ಲಿ ತನ್ನ ಸ್ನೇಹಿತನ ಭೇಟಿಗೆ ಸೈಕಲ್‌ನಲ್ಲಿ ಶಶಾಂಕ್ ತೆರಳುವಾಗ ಈ ಘಟನೆ ನಡೆದಿದೆ.
ಅಪಘಾತದ ಬಳಿಕ ವಾಹನ ಬಿಟ್ಟು ಪರಾರಿಯಾಗಿರುವ ಟಿಪ್ಸರ್‌ಲಾರಿ ಚಾಲಕನ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಶಶಾಂಕ್, ಶಾಲೆ ಮುಗಿದ ಬಳಿಕ ಸಂಜೆ ತನ್ನ ಗೆಳೆಯನ ಭೇಟಿಗೆ ತೆರಳುತ್ತಿದ್ದ. ಈ ವೇಳೆ ಟಿಪ್ಪ ರ್‌ಲಾರಿ ಸೈಕಲ್‌ಗೆ ಡಿಕ್ಕಿಯಾಗಿದೆ. ಆಗ ಕೆಳಗೆ ಬಿದ್ದ ಶಶಾಂಕ್ ಮೇಲೆ ಟಿಪ್ಪರ್ ಚಕ್ರಗಳು ಹರಿದಿದ್ದು, ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಏತನ್ಮಧ್ಯೆ ದೇವನಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರೊಬ್ಬ ಸಾವನ್ನಪ್ಪಿ, ಇತರೆ ಐವರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಘಟನೆಯಲ್ಲಿ 21 ವರ್ಷದ ಎಸ್.ವಿನಯ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿ ಸವಾರ ಸಂಜಯ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೆಪಿ ನಗರದಿಂದ ನಂದಿ ಬೆಟ್ಟಕ್ಕೆ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಸ್ನೇಹಿತರ ಗುಂಪಿನ ಭಾಗವಾಗಿದ್ದ ವಿನಯ್. ನಂದಿ ಬೆಟ್ಟದ ರಸ್ತೆಯ ನಿಲೇರಿ ರೈಲ್ವೆ ಗೇಟ್ ಬಳಿಯ ರಾಣಿ ಕ್ರಾಸ್‌ನಲ್ಲಿ ವಾಹನವನ್ನು ವೇಗವಾಗಿ ಚಲಿಸಿದ ಪರಿಣಾಮ ಹಂಪ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಮುಂಭಾಗದಲ್ಲಿದ್ದ ತನ್ನ ಸ್ನೇಹಿತನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಇದರಿಂದ ಆಂಧ್ರಪ್ರದೇಶದ ಎಸ್ ವರುಣ್ ಸಾಯಿ (25) ಮತ್ತು ತೆಲಂಗಾಣದ ಎಸ್ ವೈಷ್ಣವಿ (26) ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ನಂತರ ಹಿಂದೆ ಬರುತ್ತಿದ್ದ ವಿನಯ್ ಸ್ನೇಹಿತರಾದ ಎಸ್ ಪ್ರದೀಪ್ (21) ಮತ್ತು ಡಿ ಮೋಹನ್ (20) ಅವರಿದ್ದ ಮತ್ತೊಂದು ದ್ವಿಚಕ್ರ ವಾಹನವೂ ಕೆಳಗೆ ಬಿದ್ದಿದೆ. ಸಾಯಿ ಮತ್ತು ವೈಷ್ಣವಿ ಕೋರಮಂಗಲದ ಖಾಸಗಿ ಸಂಸ್ಥೆಯಲ್ಲಿ ಕಂಟೆಂಟ್ ಡೆವಲಪರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಸರಣಿ ಅಪಘಾತ ಬಳಿಕ ವಿನಯ್ ಅವರನ್ನು ದೇವನಹಳ್ಳಿಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇನ್ನು ಸಂಜಯ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಇತರ ನಾಲ್ವರು ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಘಟನೆಯಲ್ಲಿ ಮೂರು ವಾಹನಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement