
ಬೆಂಗಳೂರು: ನಗರದಲ್ಲಿ ದೇವಾಲಯಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಬನಶಂಕರಿ ಠಾಣೆ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಹೆಬ್ಬಗೋಡಿಯ ಪ್ರವೀಣ್ ಭಟ್ ಹಾಗೂ ಗೊಟ್ಟಿಗೆರೆಯ ಗುಂಡಪ್ಪ ಲೇಔಟ್ ಪಿ. ಸಂತೋಷ್ ಬಂಧಿತರಾಗಿದ್ದು, ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಲ ದಿನಗಳ ಹಿಂದೆ ಬನಶಂಕರಿಯ ಸಿದ್ಧಿ ಗಣಪತಿ ದೇವಾಲಯದಲ್ಲಿ ಬೀಗ ಮುರಿದು ದೇವರಿಗೆ ತೊಡಿಸಿದ್ದ ಚಿನ್ನಾಭರಣವನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಪ್ರವೀಣ್ ಭಟ್ ಹಾಗೂ ಸಂತೋಷ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ದೇವಾಲಯಗಳಿಗೆ ಕನ್ನ ಹಾಕುವುದಕ್ಕೆ ಈ ಇಬ್ಬರು ಕುಖ್ಯಾತಿ ಪಡೆದಿದ್ದರು.
ಸಂತೋಷ್ ಈಜುಕೊಳ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದು, ನಗರದ ಜಯನಗರ, ಕೆ.ಎಸ್. ಲೇಔಟ್, ಬನಶಂಕರಿ ಮತ್ತು ಇತರ ಪ್ರದೇಶಗಳಲ್ಲಿನ ದೇವಸ್ಥಾನಗಳಿಗೆ ನುಗ್ಗಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ. ಈತನ ವಿರುದ್ದ ಹುಳಿಮಾವು ಮತ್ತು ಬೊಮ್ಮನಹಳ್ಳಿ ಪೊಲೀಸ್ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಿವೆ.
ಇನ್ನು ಪ್ರವೀಣ್ ಭಟ್ ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತ ಒಂದು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ.
ಸೆಪ್ಟೆಂಬರ್ 3 ರಂದು, ಸಿದ್ದಿ ಮಹಾಗಣಪತಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಬನಶಂಕರಿ ಪೊಲೀಸರಿಗೆ ದೂರು ನೀಡಿ, ವ್ಯಕ್ತಿಯೊಬ್ಬ ಅರ್ಚಕನ ಸೋಗಿನಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಿ ಬೆಳ್ಳಿ ಛತ್ರಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆಂದು ಆರೋಪಿದ್ದರು.
ತನಿಖೆ ಆರಂಭಿಸಿದ ಪೊಲೀಸರು, ಗೊಟ್ಟಿಗೆರೆಯಲ್ಲಿ ಆರೋಪಿಗಳನ್ನು ಬಂಧಿಸಿ, ಅವರು ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement