

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ಅಸಮರ್ಪಕ ಐಸಿಯು ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡದಿರುವ ಬಗ್ಗೆ ನಿರಂತರ ದೂರುಗಳು ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಇಲಾಖಾ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿರುವ ಔಷಧ ಕೊರತೆ, ಐಸಿಯು ಹಾಸಿಗೆಗಳ ಅಭಾವ ಹಾಗೂ ಸ್ವಚ್ಛತೆ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕರಿಂದ ನಿರಂತರವಾಗಿ ಬರುತ್ತಿರುವ ದೂರುಗಳು ಹಾಗೂ ಲೋಕಾಯುಕ್ತರ ಅಭಿಪ್ರಾಯಗಳ ಹಿನ್ನೆಲೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಇದೇ ವೇಳೆ ಔಷಧ ಕೊರತೆ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿದ ಸಚಿವರು, “ಔಷಧ ಸಂಪೂರ್ಣ ಮುಗಿದ ನಂತರವೇ ಟೆಂಡರ್ ಕರೆಯುವುದೇಕೆ? ಎಂದು ಕಿಡಿಕಾರಿದರು.
ಅಗತ್ಯವನ್ನು ಮುಂಚಿತವಾಗಿ ಅಂದಾಜಿಸಿ ಕನಿಷ್ಠ ಮೂರು ತಿಂಗಳ ಮೊದಲು ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಿದರು. ಸರಿಯಾದ ಯೋಜನೆ ಮತ್ತು ನಿರ್ವಹಣೆ ಇಲ್ಲದಿರುವುದೇ ಸಮಸ್ಯೆಗೆ ಕಾರಣ ಎಂದು ಹೇಳಿದರು.
ಐಸಿಯು ಹಾಸಿಗೆಗಳ ಕೊರತೆ ಕುರಿತಾಗಿ ಬಂದಿರುವ ಗಂಭೀರ ದೂರುಗಳ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಅಧಿಕಾರಿಗಳಿಂದ ಸ್ಪಷ್ಟನೆ ಕೋರಿದರು.
ಹೊಸದಾಗಿ ನಿರ್ಮಾಣವಾಗುತ್ತಿರುವ 10 ಮಹಡಿಗಳ ಕಟ್ಟಡದಲ್ಲಿ ಒಂದು ಸಂಪೂರ್ಣ ಮಹಡಿಯನ್ನು ಐಸಿಯು ಸೌಲಭ್ಯಕ್ಕೆ ಮೀಸಲಿಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್ ಅವರಿಗೆ ಸೂಚನೆ ನೀಡಿದರು. ಈ ಕಟ್ಟಡವನ್ನು ಮೇ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಇದೇ ವೇಳೆ ಸ್ವಚ್ಛತೆ ಮತ್ತು ಮೂಲಸೌಲಭ್ಯಗಳ ವಿಚಾರದಲ್ಲಿಯೂ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಸ್ಪತ್ರೆಗಳ ಶೌಚಾಲಯಗಳು ಯಾವಾಗಲೂ ಸ್ವಚ್ಛವಾಗಿರಬೇಕು ಹಾಗೂ ಲಿಫ್ಟ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು. “ಸ್ವಚ್ಛ ಶೌಚಾಲಯಗಳು ಐಶಾರಾಮಿ ಅಲ್ಲ, ಅದು ಮೂಲಭೂತ ಹಕ್ಕು” ಎಂದು ಸ್ಪಷ್ಟಪಡಿಸಿದರು.
ಅದರ ಜೊತೆಗೆ ಎಬಿ-ಎಆರ್ಕೆ (ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ) ಯೋಜನೆಯಡಿ ಬಾಕಿ ಇರುವ ಬಿಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಸಲ್ಲಿಸದಿರುವುದಕ್ಕೂ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಕೆಲ ಆಸ್ಪತ್ರೆಗಳು ಕೇವಲ ಶೇ.60ರಷ್ಟು ಮಾತ್ರ ಬಿಲ್ ಸಲ್ಲಿಸುತ್ತಿರುವುದು ಅಸಮರ್ಪಕ ಎಂದು ಹೇಳಿ, ಶೇ.100ರಷ್ಟು ಬಿಲ್ ಸಲ್ಲಿಸಿದಾಗ ಮಾತ್ರ ಸಂಸ್ಥೆಗಳು ಆರ್ಥಿಕವಾಗಿ ಬಲವಾಗುತ್ತವೆ. ಈ ಕರ್ತವ್ಯದಲ್ಲಿ ಯಾವುದೇ ಲೋಪವಾಗಬಾರದು ಎಂದು ಎಚ್ಚರಿಸಿದರು.
Advertisement