

ಬೆಂಗಳೂರು: ಕರ್ನಾಟಕ ಸರ್ಕಾರದ ಕಾನೂನು ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದು, "ಕಡಲೆಕಾಯಿ"ಯಷ್ಟು ಬೆಂಬಲ ಎಂದು ಕಿಡಿಕಾರಿದ್ದಾರೆ.
ಜಿಕೆವಿಕೆಯಲ್ಲಿ ನಡೆದ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು, 'ವೇದಿಕೆ ಮೇಲೆ ಕನ್ನಡದಲ್ಲಿ ಮಾತಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಕರ್ನಾಟಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ರಾಜ್ಯ ಸರ್ಕಾರ ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಹೆಚ್ಚುತ್ತಿರುವ ವ್ಯಾಜ್ಯಗಳು, ಹುದ್ದೆಗಳ ಕಡಿತ ಮತ್ತು ಮೂಲಸೌಕರ್ಯದ ಕೊರತೆಯನ್ನು ಅವರು ಎತ್ತಿ ತೋರಿಸಿದರು. ನ್ಯಾಯಾಂಗವು ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ ತರುತ್ತಿದ್ದರೂ, ಅದರ ಅಭಿವೃದ್ಧಿಗೆ ಕನಿಷ್ಠ ಹಣ ನೀಡಲಾಗುತ್ತಿದೆ ಎಂದು ದೂರಿದರು. ತ್ವರಿತ ಅನುಮೋದನೆಗೆ ಆಗ್ರಹಿಸಿದರು.
ಸಂಗ್ರಹವಾದ ಹಣದಲ್ಲಿ ಶೇ. 80ರಷ್ಟು ನ್ಯಾಯಾಂಗಕ್ಕೆ ಕೊಡಿ
ಕೋರ್ಟ್ ಪೀ, ಸ್ಟ್ಯಾಂಪ್ ಡ್ಯೂಟಿ ಮತ್ತು ದಂಡದ ರೂಪದಲ್ಲಿ ನ್ಯಾಯಾಲಯಗಳು ಸರ್ಕಾರಕ್ಕೆ ನೀಡುತ್ತಿರುವ ಆದಾಯದ ಬಗ್ಗೆಯೂ ಮಾಹಿತಿ ನೀಡಿದ ಅವರು, 2023-24ರಲ್ಲಿ 374 ಕೋಟಿ ರೂ, 2024-25 ರಲ್ಲಿ 439 ಕೋಟಿ ರೂ ಮತ್ತು 2025-26ರಲ್ಲಿ 470 ಕೋಟಿ ರೂ. ಸಂಗ್ರಹವಾಗಿದೆ. ಸರ್ಕಾರಕ್ಕೆ ನಾವು ನೀಡುತ್ತಿರುವ ಆದಾಯದ ಪೈಕಿ ಕನಿಷ್ಠ 75-80% ಹಣವನ್ನು ನ್ಯಾಯಾಂಗದ ಅಭಿವೃದ್ಧಿಗೆ ನೀಡಿ. ಸಿಬ್ಬಂದಿ ಸಂಬಳ ಹೊರತುಪಡಿಸಿ ನ್ಯಾಯಾಲಯಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಹಣ ಅತ್ಯಂತ ಕಡಿಮೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ಕಲಬುರ್ಗಿ, ಬೆಂಗಳೂರು, ಧಾರವಾಡ ಪೀಠಗಳಲ್ಲಿ 666 ಹುದ್ದೆಗಳ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದು, ಅಧಿಕಾರಿಗಳು 238 ಹುದ್ದೆಗಳನ್ನು ಅನುಮೋದಿಸಿದ್ದಾರೆ. ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆಗಳ ಪ್ರಸ್ತಾವ ಕಳುಹಿಸಿದಾಗ ಕೇವಲ 400 ಹುದ್ದೆಗಳನ್ನು ಅನುಮೋದಿಸಲಾಗಿದೆ. ನ್ಯಾಯಾಲಯಗಳ ಕಟ್ಟಡ ನಿರ್ಮಾಣಕ್ಕೆ, ನ್ಯಾಯಾಧೀಶರ ನಿವಾಸಗಳ ನಿರ್ಮಾಣ ಮಾಡುವುದು ವಿವಿಧ ಜಿಲ್ಲೆಗಳಲ್ಲಿ ಅತ್ಯವಶ್ಯಕವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಕಳಿಸಿದಾಗ ಮಂದಗತಿಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು ಅನೇಕ ಬಾರಿ ಗಮನಹರಿಸುತ್ತಾರೆ ಎಂದರು.
ಪ್ರತಿವರ್ಷ ವ್ಯಾಜ್ಯಗಳು ಹೆಚ್ಚು ದಾಖಲಾತಿ ಆಗ್ತಿದೆ. 2023 ರಲ್ಲಿ 17 ಲಕ್ಷ ಇದ್ದು, 2025 ರಲ್ಲಿ 22 ಲಕ್ಷ ಕೇಸ್ ದಾಖಲಾಗಿವೆ. ಹೊಸ ಕಾನೂನುಗಳು ಮಂಡನೆ ಆಗುತ್ತಿದೆ. ಕಾನೂನು ಅಡಿಯಲ್ಲಿ ನ್ಯಾಯ ವಿತರಣೆ ಮಾಡಬೇಕಾಗುತ್ತದೆ. ಮೂಲಸೌಕರ್ಯಗಳು, ನ್ಯಾಯಾಧೀಶರ ನೇಮಕಾತಿ ಬಗ್ಗೆ, ಸರ್ಕಾರಿ ವಕೀಲರ ನೇಮಕದ ಬಗ್ಗೆ ನ್ಯಾಯಾಲಯಗಳು ಪ್ರಸ್ತಾವನೆ ಸಲ್ಲಿಸಿದಾಗ ತಮ್ಮ ಅಧಿಕಾರಿಗಳು ಮಂದಗತಿಯಲ್ಲಿ ಅಥವಾ ಅದರ ಬಗ್ಗೆ ಗಮನಹರಿಸದೇ ಬೇಡಿಕೆಗಳನ್ನ ಕಡಿತಗೊಳಿಸಿ ಅನುಮೋದಿಸಿರೋ ಉದಾಹರಣೆಗಳು ಬೇಕಾದಷ್ಟು ಇವೆ ಅಂತ ಅಸಮಾಧಾನ ಹೊರ ಹಾಕಿದ್ರು.
ಹೈಕೋರ್ಟ್ ನಿಂದ ಬರುವ ಪ್ರಸ್ತಾವನೆಯನ್ನ ಕಡಿತ ಗೊಳಿಸದೇ ತ್ವರಿತವಾಗಿ ಅನುಮೋದನೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಬೇಕು. ಈ ಸೌಲಭ್ಯಗಳು ನೀಡಿದಲ್ಲಿ ನಮ್ಮ ನ್ಯಾಯಾಧೀಶರು ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯ ಮಾಡೋದ್ರಲ್ಲಿ ಯಾವುದೇ ಸಂದೇಹವಿಲ್ಲ ಅಂತ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯಗೆ ತಿಳಿಸಿದರು.
ಲೋಕಾಯುಕ್ತಕ್ಕೆ ಶ್ಲಾಘನೆ
ಇದೇ ವೇಳೆ ಕರ್ನಾಟಕ ಲೋಕಾಯುಕ್ತವನ್ನು ಶ್ಲಾಘಿಸಿದ ನ್ಯಾಯಮೂರ್ತಿಗಳು, ಕರ್ನಾಟಕ ಲೋಕಾಯುಕ್ತ ತನ್ನ 40 ವರ್ಷಗಳ ಅರ್ಥಪೂರ್ಣ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಾರ್ಥಕ ಪಯಣದ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗದ ಮುಂದಿರುವ ಸವಾಲುಗಳನ್ನು ಅಂಕಿಅಂಶಗಳ ಸಮೇತ ವಿವರಿಸಿದರು.
2023 ರಲ್ಲಿ ರಾಜ್ಯದಲ್ಲಿ 17 ಲಕ್ಷ ಇದ್ದ ವ್ಯಾಜ್ಯಗಳ ಸಂಖ್ಯೆ, 2025 ರ ವೇಳೆಗೆ 22 ಲಕ್ಷಕ್ಕೆ ಏರಿಕೆಯಾಗಿದೆ. ಹೊಸ ಕಾನೂನುಗಳು ಜಾರಿಗೆ ಬರುತ್ತಿದ್ದು, ಅವುಗಳ ಅಡಿಯಲ್ಲಿ ನ್ಯಾಯ ವಿತರಣೆ ಮಾಡಲು ಆಧುನಿಕ ಮೂಲಸೌಕರ್ಯ ಮತ್ತು ಹೆಚ್ಚಿನ ನ್ಯಾಯಾಧೀಶರ ಅಗತ್ಯವಿದೆ. ನ್ಯಾಯಾಂಗ ಇಲಾಖೆಯಿಂದ ಕಳುಹಿಸಲಾದ ಪ್ರಸ್ತಾವನೆಗಳನ್ನು ಸರ್ಕಾರಿ ಅಧಿಕಾರಿಗಳು ಸರಿಯಾಗಿ ಗಮನ ಹರಿಸುತ್ತಿಲ್ಲ ಅಥವಾ ಮಂದಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೈಕೋರ್ಟ್‌ನ ಮೂರು ಪೀಠಗಳಿಗೆ 660 ಹುದ್ದೆಗಳನ್ನು ಕೇಳಿದರೆ ಅನುಮೋದನೆ ಸಿಕ್ಕಿದ್ದು ಕೇವಲ 238 ಕ್ಕೆ ಮಾತ್ರ. ಅಂತೆಯೇ ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆಗಳ ಬದಲಿಗೆ ಕೇವಲ 400 ಹುದ್ದೆಗಳಿಗೆ ಒಪ್ಪಿಗೆ ನೀಡಲಾಗಿದೆ. ನ್ಯಾಯಾಧೀಶರ ನಿವಾಸಗಳು ಮತ್ತು ನ್ಯಾಯಾಲಯದ ಕಟ್ಟಡಗಳ ನಿರ್ಮಾಣಕ್ಕೆ ಕಳುಹಿಸಿದ ಪ್ರಸ್ತಾವನೆಗಳು ಇನ್ನೂ ಧೂಳು ಹಿಡಿಯುತ್ತಿವೆ.
Advertisement