

ಬೆಂಗಳೂರು: ಕರ್ನಾಟಕದ ವರನಟ ಡಾ.ರಾಜ್ ಕುಮಾರ್ ಅವರ ಸ್ಮಾರಕ ಜಾಗದ ಕುರಿತು ಕೊಂಕು ನುಡಿದಿದ್ದ ನಟ ಚೇತನ್ ಇದೀಗ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದು, ಬೆಂಗಳೂರಿನ ಚೇತನ್ ಮನೆ ಮುಂದೆ ದೊಡ್ಡ ಹೈಡ್ರಾಮಾವೇ ನಡೆದಿದೆ.
ಈ ಹಿಂದೆ ಸಾಕಷ್ಟು ವಿಚಾರಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಿದ್ದ ನಟ ಚೇತನ್ ಅಹಿಂಸಾ ಇದೀಗ ಕರ್ನಾಟಕದ ವರನಟ ಡಾ.ರಾಜ್ ಕುಮಾರ್ ಅವರ ಕುರಿತು ಹೇಳಿಕೆ ನೀಡಿ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಡಾ.ರಾಜ್ ಕುಮಾರ್ ಅವರ ಸ್ಮಾರಕಕ್ಕೆ ಏಕೆ 2.5ಎಕರೆ ಜಾಗ ನೀಡಲಾಗಿದೆ ಎಂದು ಪ್ರಶ್ನೆ ಎತ್ತುವ ಮೂಲಕ ಚೇತನ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಇದೀಗ ಡಾ.ರಾಜ್ ಕುಮಾರ್ ಅಭಿಮಾನಿಗಳು ಚೇತನ್ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ.
ಚೇತನ್ ಅಹಿಂಸ ವಿರುದ್ಧ ಈಗಾಗಲೇ ಕೆಲ ಕನ್ನಡಪರ ಸಂಘಟನೆಗಳು, ರಾಜ್‌ಕುಮಾರ್ ಅಭಿಮಾನಿಗಳ ಸಂಘಗಳು ಪೊಲೀಸ್ ಠಾಣೆಯಲ್ಲಿ ಮತ್ತು ಚಲನಚಿತ್ರ ಸಂಘಗಳಿಗೆ ದೂರು ನೀಡಿವೆ.
ಅವನನ್ನ ಬದುಕೋಕೆ ಬಿಡಲ್ಲ: ಸಾರಾ ಗೋವಿಂದು ಆಕ್ರೋಶ
ಇದೀಗ ರಾಜ್‌ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಜೊತೆಗೆ ಚೇತನ್ ಅವರಿಗೆ ನೇರವಾಗಿ, ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ‘ಈ ಬಾರಿ ಚೇತನ್ಗೆ ಒದೆ ಬೀಳುವುದು ಖಂಡಿತ’ ಎಂದಿದ್ದಾರೆ.
'ಕ್ಷಮೆ ಕೇಳುವುದಕ್ಕೂ ಸಹ ಅವನಿಗೆ ಯೋಗ್ಯತೆ ಇಲ್ಲ. ಕರ್ನಾಟಕಕ್ಕೆ ಅವನ (ಚೇತನ್ ಅಹಿಂಸ) ಕೊಡುಗೆ ಏನು? ಎಷ್ಟು ಸಿನಿಮಾ ಮಾಡಿದ್ದಾನೆ ಅವನು? ತಿರ್ಕೋಂಡು ತಿಂತಿದ್ದಾನೆ. ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಿದ್ದೀಯ? ನೀನು ಮೇರು ನಟರ ಬಗ್ಗೆ ಮಾತನಾಡುತ್ತೀಯ. ಆತನೊಬ್ಬ ನಿರುದ್ಯೋಗಿ, ಕೈಯಲ್ಲಿ ಮಾಡೋಕೆ ಕೆಲಸ ಇಲ್ಲ, ಮೊದಲು ಕೆಲಸ ಹುಡುಕಿಕೊ. ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತೀವಿ, ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು’ ಎಂದಿದ್ದಾರೆ.
ಅಲ್ಲದೆ 'ಅಣ್ಣಾವ್ರ ಸ್ಮಾರಕದ ಜಾಗ ನಮಗೆಲ್ಲ ದೇವಸ್ಥಾನ. ಸ್ಮಾರಕವನ್ನು ಕಾಂಪ್ಲೆಕ್ಸ್ ಅಂತಿಯಲ್ಲ ಅಲ್ಲಿ ಯಾವ ಕಮರ್ಷಿಯಲ್ ಆಕ್ಟಿವಿಟೀಸ್ ನಡೆಯುತ್ತಿದೆ? ಸರ್ಕಾರ ಕೂಡಲೆ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಜೊತೆಗೆ ಚೇತನ್ ಗೆ ಅಣ್ಣಾವ್ರ ಅಭಿಮಾನಿಗಳು ಸರಿಯಾದ ಪಾಠ ಕಲಿಸ್ತೀವಿ' ಎಂದು ಹೇಳಿದ್ದರು.
ಚೇತನ್ ಮನೆ ಮುಂದೆ ಹೈಡ್ರಾಮಾ
ಇನ್ನು ಕನ್ನಡಪರ ಸಂಘಟನೆಗಳು ಮತ್ತು ಡಾ.ರಾಜ್ ಅಭಿಮಾನಿಗಳ ಸಂಘದ ಸದಸ್ಯರು ಬೆಂಗಳೂರಿನಲ್ಲಿರುವ ನಟ ಚೇತನ್ ಮನೆಗೆ ಮುತ್ತಿಗೆ ಹಾಕಿದ್ದು, ಚೇತನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ವಿವಾದಕ್ಕೆ ಕಾರಣವಾದ ಟ್ವೀಟ್
ನಟ ಚೇತನ್ ಡಾ.ರಾಜ್ ಕುಮಾರ್ ಸಮಾಧಿ ಕುರಿತು ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಟ್ವೀಟ್ ನಲ್ಲಿ 'ನಾವು ರಾಜ್‌ಕುಮಾರ್ ಅವರನ್ನು ಒಬ್ಬ ಶ್ರೇಷ್ಠ ಕಲಾವಿದ ಎಂದು ಗೌರವಿಸುತ್ತೇವೆ. ಆದರೆ, 2006ರಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಈ ನಟನ ಸ್ಮಾರಕ ಸಂಕೀರ್ಣಕ್ಕಾಗಿ 2.5 ಎಕರೆ ಭೂಮಿಯನ್ನು ನೀಡಿದ್ದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕು. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ ಎಂದು ಟ್ವೀಟ್ ಮಾಡಿದ್ದರು. ಇದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಪೊಲೀಸ್ ದೂರು ದಾಖಲು
ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಅಭಿಮಾನಿಗಳು, ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಿಸಿದ್ದಾರೆ. ಅಣ್ಣಾವ್ರು ಕನ್ನಡ ಭಾಷೆ, ಕಲೆ ಮತ್ತು ನಾಡಿಗೆ ನೀಡಿದ ಕೊಡುಗೆಯನ್ನು ಅರಿಯದೆ ಚೇತನ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಕೊನೆಗೂ ನಟ ಚೇತನ್ ಕ್ಷಮೆಯಾಚನೆ!
ಇನ್ನು ಅಣ್ಣಾವ್ರ ಅಭಿಮಾನಿಗಳು ನಟ ಚೇತನ್ ಮನೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗುತ್ತಲೇ ಪೊಲೀಸರ ಸಮ್ಮುಖದಲ್ಲಿ ಹೊರಗೆ ಬಂದ ನಟ ಚೇತನ್ ಹೋರಾಟಗಾರರ ಕ್ಷಮೆಯಾಚಿಸಿದ್ದಾರೆ.
'ನನ್ನ ಮಾತುಗಳಿಂದ ಕನ್ನಡಿಗರ ಮತ್ತು ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನಾನೂ ಕೂಡ ಡಾ. ರಾಜ್ ಕುಮಾರ್ ಅವರ ಅಭಿಮಾನಿ. ಆದರೆ ಸಮಾಜದಲ್ಲಿ ಜಾಗೃತಿಯಾಗಬೇಕು. ಒಂದು ಉತ್ತಮ ಪ್ರಜಾಪ್ರಭುತ್ವ ಕಟ್ಟಬೇಕು. ರಾಜ್ ಕುಮಾರ್ ಅವರು ಕಂಡ ಕನಸಿನ ಚಿತ್ರರಂಗವನ್ನು ನಾವೂ ಕೂಡ ಕಟ್ಟಬೇಕು. ಅದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
Advertisement