ಮಳೆ ಬಳಿಕ ಸಿಲಿಕಾನ್ ಸಿಟಿ ಕೂಲ್-ಕೂಲ್: 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿತ; ಮುಂದಿನ 2 ದಿನಗಳೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ..!

ಹೆಚ್ಎಎಲ್ ವಿಮಾನ ನಿಲ್ದಾಣ ವೀಕ್ಷಣಾಲಯದಲ್ಲಿ ಸಂಜೆ 5.30ರವರೆಗೆ 24.7 ಮಿಮೀ ಮಳೆಯಾಗಿದ್ದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಸ್ವಲ್ಪ (0.1 ಮಿಮೀವರೆಗೆ) ಮಳೆ ದಾಖಲಾಗಿದೆ.
Bengaluru rain
ಭಾರೀ ಮಳೆ ಪರಿಣಾಮ ನಗರದ ರಸ್ತೆಯಲ್ಲಿ ನೀರು ತುಂಬಿರುವುದು.
Updated on

ಬೆಂಗಳೂರು: ನಗರದಲ್ಲಿ ಬುಧವಾರ ಕೇವಲ ಒಂದು ಗಂಟೆಯ ಅವಧಿಯಲ್ಲಿ ಭಾರಿ ಮಳೆಯೊಂದಿಗೆ ಮಿಂಚು, ಗುಡುಗು ಹಾಗೂ ಆಲಿಕಲ್ಲು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.

ಭಾರತೀಯ ಹವಾಮಾನ ಇಲಾಖೆ (IMD) ನಗರ ವೀಕ್ಷಣಾಲಯದ ಪ್ರಕಾರ ಬೆಂಗಳೂರಿನಾದ್ಯಂತ ಸರಾಸರಿ 80 ಮಿಮೀ ಮಳೆಯಾಗಿದೆ. ಜೊತೆಗೆ ಗಂಟೆಗೆ 75 ಕಿಮೀ ವೇಗದ ಬಲವಾದ ಗಾಳಿಯೂ ದಾಖಲಾಗಿದೆ.

ಹೆಚ್ಎಎಲ್ ವಿಮಾನ ನಿಲ್ದಾಣ ವೀಕ್ಷಣಾಲಯದಲ್ಲಿ ಸಂಜೆ 5.30ರವರೆಗೆ 24.7 ಮಿಮೀ ಮಳೆಯಾಗಿದ್ದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಸ್ವಲ್ಪ (0.1 ಮಿಮೀವರೆಗೆ) ಮಳೆ ದಾಖಲಾಗಿದೆ.

ಬಿರುಸಿನ ಮಳೆಯ ಪರಿಣಾಮವಾಗಿ ಬಿಸಿಲಿನ ತೀವ್ರತೆ ತಕ್ಷಣವೇ ಕಡಿಮೆಯಾಗಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ಇದರಿಂದ ಜನರಿಗೆ ತಾತ್ಕಾಲಿಕವಾಗಿ ತಂಪಿನ ಅನುಭವವಾದರೂ, ಆಲಿಕಲ್ಲು ಮಳೆಯ ಜೊತೆಗೆ ಬಂದ ಗಾಳಿಯ ವೇಗದಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ.

ಐಎಂಡಿ ಆರಂಭದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದರೂ, ನಂತರ ಅದನ್ನು ಆರೆಂಜ್ ಅಲರ್ಟ್‌ಗೆ ಬದಲಿಸಿತ್ತು. ಭಾರಿ ಮಳೆ, ಗಾಳಿ, ಮಿಂಚು ಮತ್ತು ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಿತ್ತು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೂ ಈ ಎಚ್ಚರಿಕೆಯನ್ನು ನೀಡಿತ್ತು.

Bengaluru rain
ಬೆಂಗಳೂರಿಗೆ ಕೊನೆಗೂ ತಂಪರೆದ ಮಳೆರಾಯ, ಮೇ 2ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಐಎಂಡಿ ಬೆಂಗಳೂರು ನಿರ್ದೇಶಕ (ಕಾರ್ಯನಿರ್ವಹಣೆ) ಎನ್. ಪುವಿಯಾರಸನ್ ಅವರು ಮಾತನಾಡಿ, ಇತ್ತೀಚೆಗೆ ನಗರದಲ್ಲಿ ಕಂಡುಬಂದ ಮಳೆಯಲ್ಲಿ ಇದು ಮೂರನೇ ಮತ್ತು ಅತ್ಯಂತ ತೀವ್ರ ಆಲಿಕಲ್ಲು ಮಳೆಯಾಗಿದೆ. ಮಾರ್ಚ್ ಎರಡನೇ ವಾರ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಎರಡು ದಿನಗಳವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಜೊತೆಗೆ ತುಮಕೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ನಂತರ ಗರಿಷ್ಠ ತಾಪಮಾನ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುರಿದ ಮಳೆಗೆ ವಾಯುಭಾರ ಕುಸಿತ ಕಾರಣವಾಗಿದೆ. ಆದರೆ ಈ ರೀತಿಯ ಅಸ್ಥಿರ ಹವಾಮಾನದಿಂದ ನಿಖರ ಸ್ಥಳಗಳಲ್ಲಿ ಮಳೆಯ ಮುನ್ಸೂಚನೆ ನೀಡುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೂರ್ವ ಮಾನ್ಸೂನ್ ಮಳೆಯ ಸಮಯದಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ನಿಖರವಾದ ಸ್ಥಳಗಳನ್ನು ಊಹಿಸುವುದು ಕಷ್ಟ. ಏಕೆಂದರೆ ಅದು ವಿರಳವಾಗಿ ಮತ್ತು ಕ್ರಿಯಾತ್ಮಕವಾಗಿರುತ್ತದೆ. ಮಧ್ಯಮ ಮಳೆ ಮತ್ತು ಗಂಟೆಗೆ 40-50 ಕಿ.ಮೀ ವೇಗದ ಗಾಳಿಗೆ ಮುನ್ಸೂಚನೆ ನೀಡಲಾಗಿದ್ದರೂ, ಮಧ್ಯ ಬೆಂಗಳೂರಿನಲ್ಲಿ ಗಾಳಿಯ ವೇಗ ದುಪ್ಪಟ್ಟಾಗಿತ್ತು. ಇದು ರಾಜ್ಯ ಸರ್ಕಾರಿ ಅಧಿಕಾರಿಗಳನ್ನು ಎಚ್ಚರದಿಂದಿರಿಸಿದ್ದು, ಪೂರ್ವಸಿದ್ಧತಾ ಕ್ರಮಗಳನ್ನು ವೇಗಗೊಳಿಸುವಂತೆ ಒತ್ತಾಯಿಸಿದೆ.

ಬೆಂಗಳೂರು ಮಳೆಯ ಪ್ರಮಾಣ (ಸಂಜೆ 6.30ರವರೆಗೆ):

  • ಕಾಟನ್ ಪೇಟೆ - 74.5ಮಿ.ಮೀ

  • ಚಾಮರಾಜಪೇಟೆ -74ಮಿ.ಮೀ

  • ಬೊಮ್ಮನಹಳ್ಳಿ - 61.5ಮಿ.ಮೀ

  • ಪುಲಕೇಶಿನಗರ --60ಮಿ.ಮೀ

  • ವಿಶ್ವೇಶ್ವರಪುರಂ -58ಮಿ.ಮೀ

  • ನೆರಿಗ - 54.5ಮಿ.ಮೀ

  • ರಾಜಮಹಲ್ ಗುಟ್ಟಹಳ್ಳಿ - 52ಮಿ.ಮೀ

  • BTMಲೇಔಟ್ - 46mm

  • ವನ್ನರಪೇಟ್ - 38.5ಮಿ.ಮೀ

  • ಬೇಗೂರು - 35.6ಮಿ.ಮೀಬೆಗೂರು – 35.6 ಮಿಮೀ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com